ಮಂಡ್ಯ:ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸರ್ ಎಂ.ವಿ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು, ಕೆಲ ಕಾಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದರು. ಬಳಿಕ ಮೆರವಣಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಬ್ಬಿನ ಉತ್ಪಾದನಾ ವೆಚ್ಚ ಆಧರಿಸಿ ಎಫ್‌ಆರ್‌ಪಿ ದರವನ್ನು ಐದು ಸಾವಿರ ರೂ ನಿಗದಿ ಮಾಡಬೇಕು. ಕಬ್ಬು ಸಾಗಾಣಿಕೆ ಮತ್ತು ಕಟಾವು (ಎಚ್ ಆ್ಯಂಡ್ ಟಿ) ವೆಚ್ಚ ಕಾರ್ಖಾನೆಯವರೇ ಭರಿಸಬೇಕು. ಮತ್ತು ಹಿಂದಿನ ಬಾಕಿ 150 ರೂ ಹಾಗೂ 2025-26ನೇ ಸಾಲಿನ 100 ರೂ.ಗಳ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಶಕ್ತಿ ಕೇಂದ್ರವಾಗಿರುವ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಕಾರ್ಯ ವಿಳಂಬ ತಪ್ಪಿಸಬೇಕು. ಸರ್ವೇ ಕಾರ್ಯಗಳ ವಿಳಂಬ ನೀತಿ ನಿಲ್ಲಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಅನುಭವದಾರರಿಗೆ ದುರಸ್ಥಿ ಪೋಡಿ ಕೆಲಸವಾಗಬೇಕು. ರಾಷ್ಟ್ರೀಕೃತ, ಸಹಕಾರ ಬ್ಯಾಂಕುಗಳಲ್ಲಿ ಬೆಳೆ ಸಾಲ ಸುಲಭ ನೀತಿಗೊಳಿಸಬೇಕು. ಪ್ರತಿ ಎಕರೆಗೆ ಐದು ಲಕ್ಷ ರೂ ಸಾಲ ದೊರೆಯಬೇಕು. ಸಿಬಿಲ್ ನೀತಿ ರೈತರಿಗೆ ಹೊರತುಪಡಿಸಬೇಕು. ಅಡಮಾನ ಇಡುವ ಒಡವೆಗಳಿಗೆ ನವೀಕರಣ ಸಮಯದಲ್ಲಿ ಅಸಲು ಪಾವತಿಸಿ ಎಂಬ ನಿಯಮ ತಪ್ಪಬೇಕು ಎಂದು ಆಗ್ರಹಿಸಿದರು.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅಕ್ರಮ-ಸಕ್ರಮ ಯೋಜನೆ ಮರು ಜಾರಿ ಮಾಡಿ ಸರ್ಕಾರವೇ ಶುಲ್ಕ ಭರಿಸಬೇಕು. ಕೆ.ಆರ್.ಎಸ್ ಡ್ಯಾಂನಲ್ಲಿ ಸಾಕಷ್ಟು ನೀರು ಲಭ್ಯವಿರುವುದರಿಂದ ಮುಂದಿನ ಮೇ ಜೂನ್ ತಿಂಗಳವರೆಗೆ ನಾಲೆಗಳಲ್ಲಿ ನೀರು ಬಿಡುಗಡೆ ಮಾಡಿ ಬೇಸಿಗೆ ಕಾಲದಲ್ಲಿ ಬೆಳೆ ರಕ್ಷಣೆ ಮಾಡಬೇಕು. ನಾಲೆಗಳು ಆಧುನೀಕರಣಗೊಳಿಸಿ ಜಿಲ್ಲೆಯ ಕೊನೆ ಭಾಗದ ರೈತರಿಗೆ ನೀರು ತಲುಪಬೇಕು. ಜಿಲ್ಲೆಯಲ್ಲಿ ಉಳಿದಿರುವ ಕೆರೆ ಕಟ್ಟೆಗಳ ಹೂಳು ತೆಗೆಸಬೇಕು. ರೈತರ ಎಲ್ಲ ಬೆಳೆಗಳಿಗೆ ವಿಮೆ ಸೌಲಭ್ಯ ಸಿಗಬೇಕು. ಬೇಸಿಗೆಯಲ್ಲಿ ತೆಂಗಿನ ಮರಗಳಿಗೆ ನುಶಿ, ಕೀಟಬಾದೆ ಹಾವಳಿಯಿಂದ ಮರಳು ನಾಶವಾಗುತ್ತಿದ್ದು, ನಷ್ಟ ಹೊಂದಿದ ರೈತರಿಗೆ ತೆಂಗಿನ ಮರಗಳ ಜೀವಿತಾವಧಿ ಲೆಕ್ಕದಲ್ಲಿ ಒಂದು ಮರಕ್ಕೆ 25 ಸಾವಿರ ರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಪರ್ಕ ನಾಲಾ ಸುರಂಗ ವ್ಯಾಪ್ತಿಯಲ್ಲಿ ಗಣಿಗಾರಿಕೆ ಸಂಪೂರ್ಣ ನಿಲ್ಲಿಸಬೇಕು. ನಾಗಮಂಗಲ ತಾಲೂಕಿನಲ್ಲಿ ರಿಗ್‌ಬೋರಿಂಗ್ ಮೂಲಕ ಗಣಿಗಾರಿಕೆ ನಡೆಯುತ್ತಿದ್ದು, ಭೂ ಕಂಪನವಾಗಿ ಅಂತರ್ಜಲ ಕುಸಿಯುತ್ತಿದೆ. ಇಂತಹ ಗಣಿಗಾರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಬೆಂಗಳೂರಿಗೆ ಮಂಡ್ಯ ಜಿಲ್ಲೆಯ ಕಾವೇರಿ ನದಿಯಿಂದ 6ನೇ ಹಂತದ ನೀರಾವರಿ ಯೋಜನೆಯನ್ನು ಕೈಬಿಡಬೇಕು. ರಾಜ್ಯದಲ್ಲಿ ಒಂದನೇ ತರಗತಿಯಿಂದ 12ನೇ ತರಗತಿವರೆಗೆ ದ್ವಿಭಾಷಾ ನೀತಿಯಲ್ಲಿ ಏಕರೂಪ ಶಿಕ್ಷಣ ಜಾರಿಯಾಗಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.