ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ ಸೇರಿದಂತೆ ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಹದಿಮೂರು ಕೇಂದ್ರಗಳಲ್ಲಿ ಪಲ್ಸ್ ಪೊಲೀಯೋ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಡಾ.ವರ್ಷ ತಿಳಿಸಿದರು.
ಭಾನುವಾರ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂದೆ ಪೊಲಿಯೋ ಹನಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೊಲೀಯೋ ಹನಿಯಿಂದ ಮಕ್ಕಳು ವಂಚಿತರಾಗಬಾರದು ಎಂಬ ಕಾರಣಕ್ಕೆ ದೇಶಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ. 0-5ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಹನಿ ಹಾಕಿಸಬೇಕು. ತಂಡಗಳನ್ನು ರಚಿಸಿ ಮೇಲುಕೋಟೆ ಪ್ರಾಥಮಿಕ ಕೇಂದ್ರ ವ್ಯಾಪ್ತಿಯ 1,802ಮಕ್ಕಳನ್ನು ಗುರುತಿಸಿ ಹನಿ ಹಾಕುವ ಮೂಲಕ ಅಭಿಯಾನ ಯಶಸ್ವಿಯಾಗಿಸಿದ್ದೇವೆ ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್, ದೇವಾಲಯದ ಹವಾಲ್ದಾರ್ ನಾಗೇಶ್, ಭದ್ರತಾ ಸಿಬ್ಬಂದಿ ಹರೀಶ, ವಿಜಯಕುಮಾರ, ಆಶಾ ಕಾರ್ಯಕರ್ತೆ ಪ್ರಭಾ, ಮಂಜುಳಾ ಇದ್ದರು.
ಇದಕ್ಕೂ ಮುನ್ನ ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಹರಿಧರ್ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯ ಜಿ.ಕೆ.ಕುಮಾರ್ ಪಿಡಿಒ ರಾಜೇಶ್ವರ್, ನಾದಸ್ವರ ವಿದ್ವಾಂಸ ಹರಿಧರ್ ಇದ್ದರು. ಚೆಲುವನಾರಾಯಣಸ್ವಾಮಿ ಮತ್ತು ಯೋಗಾನರಸಿಂಹಸ್ವಾಮಿ ದೇವಾಲಯಗಳಲ್ಲಿ 5ವರ್ಷದೊಳಗಿನ ಮಕ್ಕಳಿಗೆ ಪೊಲೀಯೋ ಹನಿ ಹಾಕಲಾಯಿತು.