ರಾಗಿ ಖರೀದಿಯ ಹಣ ಬಿಡುಗಡೆ ಮಾಡಿ: ಬಿಜೆಪಿ ಕಾರ್ಯಕರ್ತರಿಂದ ಮನವಿ ಸಲ್ಲಿಕೆ

ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
Published on
ಮಂಡ್ಯ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಿರುವ ರಾಗಿಗೆ ಸಂಬಂಧಿಸಿದಂತೆ ರೈತರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ರವಾನಿಸಿದರು. ರಾಜ್ಯಸರ್ಕಾರ ಒಂದು ಲಕ್ಷಕ್ಕೂ ಹೆಚ್ಚು ರೈತರಿಂದ ರಾಗಿ ಖರೀದಿ ಮಾಡಿದೆ. ಅದರಂತೆ ಅವರಿಗೆ 1,611 ಕೋಟಿ ರೂ ಬಿಡುಗಡೆ ಮಾಡಿಲ್ಲ. ಪರಿಣಾಮ ರೈತರಿಗೆ ಸಮಸ್ಯೆಯಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಮಾರಾಟ ಮಾಡಿದರೂ ಫಲ ಸಿಕ್ಕಿಲ್ಲ ಎಂದಿದ್ದಾರೆ.
ಈಗಾಗಲೇ ಮುಂಗಾರು ಮಳೆ ಆರಂಭವಾಗುತ್ತಿದೆ. ರೈತರು ಹೊಸದಾಗಿ ಭೂಮಿ ಹದಗೊಳಿಸಲು, ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊಳ್ಳಲು ಕೈಯಲ್ಲಿ ಹಣವಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದಾರೆ. ಅನ್ನದಾತರು ತಮ್ಮದೇ ಸ್ವಂತ ದುಡಿಮೆಯ ಹಣಕ್ಕಾಗಿ ಸರ್ಕಾರದ ಮುಂದೆ ಕೈಚಾಚುವ ಪರಿಸ್ಥಿತಿ ಬಂದಿರುವುದು ನಿಜಕ್ಕೂ ನಾಚಿಕೆಗೇಡು. ತುಮಕೂರಿನಲ್ಲಿ 34,543 ರೈತರಿಗೆ 370 ಕೋಟಿ ರೂ, ಹಾಸನದಲ್ಲಿ 29,090 ರೈತರಿಗೆ 320 ಕೋಟಿ ರೂ, ಮೈಸೂರಿನಲ್ಲಿ 16,659 ರೈತರಿಗೆ 179 ಕೋಟಿ ರೂ, ಚಿಕ್ಕಮಗಳೂರಿನಲ್ಲಿ 14,297 ರೈತರಿಗೆ 169 ಕೋಟಿ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ. ಇದರೊಂದಿಗೆ ಮಂಡ್ಯ, ಚಿತ್ರದುರ್ಗ, ರಾಮನಗರ, ಚಾಮರಾಜನಗರ ಹಾಗೂ ದಾವಣಗೆರೆ ಜಿಲ್ಲೆಗಳ ಸಾವಿರಾರು ರೈತರು ಕೂಡ ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯ ಮತ್ತು ರೈತ ವಿರೋಧಿ ನೀತಿಯಾಗಿದೆ. ವೇದಿಕೆಗಳ ಮೇಲೆ ರೈತರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರ, ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಅನ್ನ ಕೊಡುವ ರೈತರಿಗೆ ಇಂತಹ ದುಸ್ಥಿತಿ ತಂದಿಟ್ಟಿರುವ ಈ ಸರ್ಕಾರದ ನಡೆ ಖಂಡನೀಯ. ಹಾಗಾಗಿ ಈ ಕೂಡಲೇ ರೈತರ ಹಣವನ್ನು ನೀಡುವ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತೀವ್ರ ತರನಾದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಶಿವಲಿಂಗಯ್ಯ, ಪ್ರಸನ್ನಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net