ಚೆನ್ನಮ್ಮ ಪಾರ್ಥಿವ ಶರೀರರಕ್ಕೆ ಜನರಿಂದ ಅಂತಿಮ ನಮನ

ನಾಗಮಂಗಲ ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಯ ಮುಂಭಾಗಕ್ಕೆ ಆಗಮಿಸಿದ ಚನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಆದಿಚುಂಚನಗಿರಿ ಬಿ.ಜಿ. ನಗರ ಶಾಖಾ ಮಠದ ಸತ್ಕೀರ್ತಿನಾಥ ಸ್ವಾಮೀಜಿ ಪುಷ್ಪಾರ್ಚನೆಯೊಂದಿಗೆ ಅಂತಿಮ ನಮನ ಸಲ್ಲಿಸಿದರು.
ನಾಗಮಂಗಲ ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಯ ಮುಂಭಾಗಕ್ಕೆ ಆಗಮಿಸಿದ ಚನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಆದಿಚುಂಚನಗಿರಿ ಬಿ.ಜಿ. ನಗರ ಶಾಖಾ ಮಠದ ಸತ್ಕೀರ್ತಿನಾಥ ಸ್ವಾಮೀಜಿ ಪುಷ್ಪಾರ್ಚನೆಯೊಂದಿಗೆ ಅಂತಿಮ ನಮನ ಸಲ್ಲಿಸಿದರು.
Published on
ನಾಗಮಂಗಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಪಾರ್ಥಿವ ಶರೀರರಕ್ಕೆ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ನೆರೆದಿದ್ದ ಸಹಸ್ರಾರು ಜನರು ಭಾನುವಾರ ಸಂಜೆ ಅಂತಿಮ ನಮನ ಸಲ್ಲಿಸಿದರು.
ವಿಶೇಷವಾಗಿ ಅಲಂಕರಿಸಿದ್ದ ವಾಹನದಲ್ಲಿ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಹೊಳೆನರಸಿಪುರಕ್ಕೆ ತಾಲೂಕಿನ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಕೊಂಡೊಯ್ಯುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಭಾನುವಾರ ಮಧ್ಯಾಹ್ನ ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ಸಹಸ್ರಾರು ಜನರು ಜಮಾವಣೆಗೊಂಡಿದ್ದರು. ಚನ್ನಮ್ಮ ಅವರ ಪಾರ್ಥಿವ ಶರೀರ ಹೊತ್ತಿದ್ದ ವಾಹನ ಬರುವ ಒಂದು ಗಂಟೆ ಮುಂಚಿತವಾಗಿ ಹೆದ್ದಾರಿಯಲ್ಲಿ ಪ್ರತ್ಯೇಕ ಕಾರಿನಲ್ಲಿ ಹಾಸನ ಕಡೆಗೆ ತೆರಳುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೆರೆದಿದ್ದ ಜನರನ್ನು ಕಂಡು ಭಾವುಕರಾಗಿ ಕೈಮುಗಿದು ತೆರಳಿದರು.
ಬೆಂಗಳೂರಿನಿಂದ ಝೀರೋ ಟ್ರಾಫಿಕ್‌ನಲ್ಲಿ ಹೊರಟ ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯು ನೆಲಮಂಗಲ ಕ್ರಾಸ್, ಸೋಲೂರು, ಮರೂರು ಹ್ಯಾಂಡ್ ಪೋಸ್ಟ್, ಕುಣಿಗಲ್ ಕ್ರಾಸ್, ಯಡಿಯೂರು ಮಾರ್ಗವಾಗಿ ತಾಲೂಕಿನ ಗಡಿಭಾಗ ಗೊಂದಿಹಳ್ಳಿ ಪ್ರವೇಶಿಸಿ ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಮಾಜಿ ಶಾಸಕ ಸುರೇಶ್‌ಗೌಡ ಅವರು ಶ್ರೀಗಂಧದ ಹಾರ ಹಾಕಿ ಗೌರವ ನಮನ ಸಲ್ಲಿಸಿದರು.
ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರ ಹೊತ್ತಿದ್ದ ವಾಹನವನ್ನು ಕೆಲ ಹೊತ್ತು ನಿಲ್ಲಿಸಲಾಗಿತ್ತು. ಈ ವೇಳೆ ನೆರೆದಿದ್ದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ತುರುವೇಕೆರೆ ತಾಲೂಕಿನ ವಿವಿದೆಡೆಯಿಂದ ಆಗಮಿಸಿದ್ದ ಸಹಸ್ರಾರು ಜನರು ಪಾರ್ಥಿವ ಶರೀರವಿರಿಸಿದ್ದ ವಾಹನಕ್ಕೆ ಪುಷ್ಪಾರ್ಚನೆ ಮಾಡಿ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.
ಹೆದ್ದಾರಿಯುದ್ದಕ್ಕೂ ಅಂತಿಮ ನಮನ ಸಲ್ಲಿಕೆ :
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಗಡಿ ಗ್ರಾಮ ಗೊಂದಿಹಳ್ಳಿ, ನೆಲ್ಲಿಗೆರೆ ಕ್ರಾಸ್, ಬೆಳ್ಳೂರು ಕ್ರಾಸ್, ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ ಮುಂಭಾಗ, ದೇವಿಹಳ್ಳಿ, ಎ.ನಾಗತಿಹಳ್ಳಿ ಮತ್ತು ಕದಬಹಳ್ಳಿ ಸಮೀಪ ರಸ್ತೆ ಬದಿಯಲ್ಲಿ ಚೆನ್ನಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಬ್ಯಾನರ್ ಕಟ್ಟಿ ನೆರೆದಿದ್ದ ಸಹಸ್ರಾರು ಜನರು ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ಸತ್ಕೀರ್ತಿನಾಥಶ್ರೀಗಳಿಂದ ಅಂತಿಮ ನಮನ:
ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಯ ಮುಂಭಾಗಕ್ಕೆ ಆಗಮಿಸಿದ ಚೆನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಆದಿಚುಂಚನಗಿರಿ ಬಿ.ಜಿ. ನಗರ ಶಾಖಾ ಮಠದ ಸತ್ಕೀರ್ತಿನಾಥ ಸ್ವಾಮೀಜಿ ಹೂಮಾಲೆ ಹಾಕುವ ಮೂಲಕ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆದಿಚುಂಚನಗಿರಿ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ನೂರಾರು ಸಂಖ್ಯೆಯ ಸಾರ್ವಜನಿಕರು ಚೆನ್ನಮ್ಮ ಅವರ ಪಾರ್ಥಿವ ಶರೀರದ ಮೇಲೆ ಪುಷ್ಪನಮನದೊಂದಿಗೆ ಗೌರವ ನಮನ ಸಲ್ಲಿಸಿದರು.
ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯು ಹೆದ್ದಾರಿಯಲ್ಲಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಎಲ್.ನಾಗೇಶ್, ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್‌ಐ ವೈ.ಎನ್.ರವಿಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಮಾಜಿ ಶಾಸಕ ಸುರೇಶ್‌ಗೌಡ, ಸಮಾಜ ಸೇವಕ ಜವರನಹಳ್ಳಿ ಗೌರೀಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ಜಿಪಂ ಮಾಜಿ ಸದಸ್ಯರಾದ ಕಂಚನಹಳ್ಳಿ ಬಾಲು, ಮುತ್ತಣ್ಣ, ಶಿವಣ್ಣ, ಚಂದ್ರೆಗೌಡ, ಮುಖಂಡರಾದ ಅಶೋಕ್, ಗಂಗವಾಡಿ ಪುಟ್ಟಸ್ವಾಮಿ, ಕಂಚಿನಕೋಟೆಮೂರ್ತಿ ಸೇರಿದಂತೆ ಸಹಸ್ರಾರು ಮಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net