ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ, ಪ್ರಗತಿಪರ ಸಂಘಟನೆಗಳೊಂದಿಗೆ ಸೆಸ್ಕ್ ಸಿಬ್ಬಂದಿ ತಹಸೀಲ್ದಾರ್ ಚೇತನಾ ಯಾದವ್‌ಗೆ ಮನವಿ ಸಲ್ಲಿಸಿದರು. ರೈತನಾಯಕ ಕೆ.ಎಸ್.ನಂಜುಂಡೇಗೌಡ, ಮೇಳಾಪುರ ಸ್ವಾಮಿಗೌಡ, ಎಇಇ ಮಂಜುನಾಥ್ ಪ್ರಸಾದ್, ಎಇ ಪ್ರದೀಪ್, ಜೆಇ ನವೀನ್, ದೇವರಾಜು ಇದ್ದರು.
ಶ್ರೀರಂಗಪಟ್ಟಣ: ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ರೈತ, ಪ್ರಗತಿಪರ ಸಂಘಟನೆಗಳೊಂದಿಗೆ ಸೆಸ್ಕ್ ಸಿಬ್ಬಂದಿ ಬೃಹತ್ ಜಾಥಾ ನಡೆಸಿದರು.
ಪಟ್ಟಣದ ವಿದ್ಯುತ್ ಉಪ ವಿತರಣಾ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಜಮಾವಣೆಗೊಂಡ ಸೆಸ್ಕ್ ಸಿಬ್ಬಂದಿ ಕೈಯಲ್ಲಿ ವಿವಿಧ ಜಾಗೃತಿ ಫಲಕಗಳ ಹಿಡಿದು ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಘೋಷಣೆ ಕೂಗಿದರು. ಬಳಿಕ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಬಳಿಕ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರಾಜ್ಯ ಸರ್ಕಾರದ ಅಧೀನದಲ್ಲಿರುವ ಕೆಪಿಟಿಸಿಎಲ್ ಖಾಸಗೀಕರಣಗೊಳಿಸುವ ಮೂಲಕ ಬಂಡವಾಳಶಾಹಿಗಳ ತೆಕ್ಕೆಗೆ ನೀಡಲು ಮುಂದಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ತಿಕ್ಕುವ ನಡೆಯಾಗಿದೆ. ನಿಗಮ ರಾಜ್ಯ ಸರ್ಕಾರ ಸುಪರ್ದಿಯಲ್ಲಿರುವ ಕಾರಣ ರೈತಪರ, ಕೈಗಾರಿಕೆ ಅಭಿವೃದ್ಧಿ ಹಾಗೂ ಗ್ರಾಮೀಣ ವಿದ್ಯುತ್ ಅಭಿವೃದ್ಧಿಗಳಲ್ಲಿ ಹಲವು ಯೋಜನೆಗಳನ್ನು ತರಲು ಸಾಧ್ಯವಾಯಿತು. ಆದರೆ ಖಾಸಗೀಕರಣ ಪ್ರವೇಶ ಮೂಲಕ ಬಂಡವಾಳಶಾಹಿಗಳ ಅಭಿವೃದ್ಧಿಗೊಳಿಸುವ ಜನವಿರೋಧಿ ನೀತಿಗಳನ್ನು ಆಡಳಿತ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಮೇಳಾಪುರ ಸ್ವಾಮಿಗೌಡ ಮಾತನಾಡಿ, ದಶಕಗಳ ಕಾಲ ರಾಷ್ಟ್ರೀಕರಣದಿಂದ ಖಾಸಗೀಕರಣಗೊಳಿಸುವ ಸರ್ಕಾರಗಳ ಹುನ್ನಾರವನ್ನು ರೈತಾಪಿ ವರ್ಗ ಹಾಗೂ ಶ್ರಮಿಕ ವರ್ಗ ಸಾರ್ವಜನಿಕರೊಂದಿಗೆ ವಿರೋಧಿಸುತ್ತಲೆ ಇದೆ. ಇಂತಹ ಯೋಜನೆಗಳು ಜನರ ಮೇಲೆ ದಬ್ಬಾಳಿಕೆ ದರ ವಿಧಿಸುವ ಜತೆಗೆ ನೌಕರ-ಸಿಬ್ಬಂದಿ ಕೆಲಸದ ಮೇಲೂ ಒತ್ತಡ ಹೇರಿ ಅವರ ಕುಟುಂಬಗಳಿಗೂ ಮಾರಕವಾಗಲಿದ್ದಾರೆ. ಸರ್ಕಾರ ಇದನ್ನು ಪರಿಶೀಲಿಸಿ ಈ ನೀತಿಗೆ ಅವಕಾಶ ನೀಡಬಾರದು ಎಂದರು.
ಸೆಸ್ಕ್ ಎಇಇ ಮಂಜುನಾಥ್ ಪ್ರಸಾದ್ ಮಾತನಾಡಿ, ಸರ್ಕಾರದ ಅಧೀನದಲ್ಲಿರುವ ಎಲ್ಲ ಕಂಪನಿಗಳು ಉತ್ತಮವಾಗಿ ಕಾರ್ಯ ನಿರ್ವಹಣೆ ಹಾಗೂ ಗ್ರಾಹಕ ಸೇವೆ ನೀಡಿ ಎಲ್ಲ ಯೋಜನೆಗಳ ಅನುಷ್ಠಾನ ನೀಡಿದ್ದೇವೆ. ಇಂತಹ ಸಂದರ್ಭ ಸರ್ಕಾರದ ನಿಯಂತ್ರಣಕ್ಕೆ ಒಳಪಡದ ಖಾಸಗೀಕರಣ ನಮಗೆ ಸಮಸ್ಯೆಯಾಗಲಿದ್ದು, ಇದರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ತಹಸೀಲ್ದಾರ್ ಚೇತನಾ ಯಾದವ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ರೈತ ಸಂಘದ ಮುಖಂಡ ಕಡತನಾಳು ಬಾಲಕೃಷ್ಣ, ಮುಖಂಡ ಮಹದೇವು, ಕೃಷ್ಣ ಸೆಸ್ಕ್ ಜೆಇಗಳಾದ ಬಾಬು ಪ್ರಸಾದ್, ನವೀನ್ ಕುಮಾರ್, ದೇವರಾಜು, ನೌಕರರ ವಿದ್ಯುತ್ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್ ಇತರರು ಇದ್ದರು.