ಸರ್ಕಾರಿ ಶಾಲೆಗಳಲ್ಲಿನ ಬಾಂಧವ್ಯ ಬೇರೆಲ್ಲೂ ಸಿಗಲ್ಲ

೨೧ ಎನ್‌ಎಂಜಿ ೦೧: ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದ ಎಎಲ್‌ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ೧೯೮೭-೮೮ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರೊಂದಿಗೆ ಹಿರಿಯ ವಿದ್ಯಾರ್ಥಿಗಳು.
೨೧ ಎನ್‌ಎಂಜಿ ೦೧: ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದ ಎಎಲ್‌ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ೧೯೮೭-೮೮ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರೊಂದಿಗೆ ಹಿರಿಯ ವಿದ್ಯಾರ್ಥಿಗಳು.
Published on
ನಾಗಮಂಗಲ.: ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ಪಾವತಿಸಿ ದಾಖಲಾತಿ ಪಡೆದರೂ ಅಲ್ಲಿ ಕೇವಲ ಪಠ್ಯದಲ್ಲಿನ ಬೋಧನೆಗಷ್ಟೇ ಸೀಮಿತವಾಗಿರುತ್ತದೆ, ಆದರೆ ಸರ್ಕಾರಿ ಶಾಲೆಗಳಲ್ಲಿ ಗುರು- ಶಿಷ್ಯರ ನಡುವಿನ ಬಾಂಧವ್ಯ ಪಠ್ಯದ ಜತೆಗೆ ತಮ್ಮ ಕುಟುಂಬದಲ್ಲಿ ಒಬ್ಬರಂತೆ ಇರುತ್ತದೆ ಎಂದು ನಿವೃತ್ತ ಶಿಕ್ಷಕ ಎಸ್.ಕೆ.ಹನುಮೇಗೌಡ ಹೇಳಿದರು.
ತಾಲೂಕಿನ ಬೆಳ್ಳೂರು ಪಟ್ಟಣದ ಎಎಲ್‌ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ೧೯೮೭-೮೮ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುವುದು ಎಂದರೆ ಶಿಕ್ಷಕರಿಗೆ ಎಲ್ಲಿಲ್ಲದ ಪ್ರೀತಿ. ಏಕೆಂದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಮನಸ್ಸು ಅಷ್ಟು ನಿಷ್ಕಲ್ಮಶ ಹಾಗೂ ನಿರ್ಮಲವಾದುದ್ದಾಗಿರುತ್ತದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಮುಂದೆ ಎಂತಹ ದೊಡ್ಡ ಹುದ್ದೆಗೆ ಪದೋನ್ನತಿ ಪಡೆದರು ಕೂಡ ತನ್ನ ಪ್ರಾಥಮಿಕ ಶಾಲಾ ಹಂತದ ಸೇವೆಯನ್ನೇ ಹೆಚ್ಚು ನೆನೆಯುತ್ತಾನೆ. ಏಕೆಂದರೆ ಅದು ಆ ಶಿಕ್ಷಕನಿಗೆ ತವರು ಮನೆಯಿದ್ದಂತಾಗಿರುತ್ತದೆ. ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ಕಟ್ಟಿ ಮಕ್ಕಳನ್ನು ದಾಕಲಿಸಿದರೂ ಶಿಕ್ಷಕ ಹಾಗೂ ಮಕ್ಕಳ ನಡುವೆ ಗುರು-ಶಿಷ್ಯರ ಬಾಂಧವ್ಯವನ್ನು ಕಾಣಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮಾತ್ರ ಗುರು ಶಿಷ್ಯರ ಉತ್ತಮ ಬಾಂಧವ್ಯವನ್ನು ಕಾಣಲು ಸಾಧ್ಯವಿರುವುದು. ವಿದ್ಯಾಭ್ಯಾಸ ಕಲಿತ ಹಲವು ದಶಕಗಳ ನಂತರವೂ ತಮಗೆ ಪಾಠ ಕಲಿಸಿದ ಶಿಕ್ಷಕರನ್ನು ನೆನೆದು ಅಭಿನಂಧಿಸುವುದು ಮಹಾನ್ ದೊಡ್ಡ ಕೆಲಸ ಎಂದರೆ ತಪ್ಪಾಗಲಾರದು. ಇಂತಹ ಮನೋಭಾವವನ್ನು ಸರ್ಕಾರಿ ಶಾಲೆಯ ಮಕ್ಕಳಲ್ಲಿ ಮಾತ್ರ ಕಾಣಲು ಸಾಧ್ಯವಾಗುತ್ತದೆ. ತಾನು ಪಾಠ ಮಾಡಿದ ವಿದ್ಯಾರ್ಥಿಗಳು ತಮ್ಮ ಗುರು-ಹಿರಿಯರನ್ನು ನೆನೆದು ಗೌರವಿಸುವುದು ಹಾಗೂ ಉತ್ತಮವಾಗಿ ಜೀವನ ರೂಪಿಸಿಕೊಂಡು ಬದುಕುವುದಕ್ಕಿಂತ ಮತ್ತೇನನ್ನು ಶಿಕ್ಷಕ ಅಪೇಕ್ಷೆಪಡುವುದಿಲ್ಲ ಎಂದರು.
ಸರ್ಕಾರಿ ಶಾಲೆಗಳನ್ನು ಉಳಿಸಿ:
ಸರ್ಕಾರಿ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಚ್ಚುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ. ಶಿಕ್ಷಣ ಎಂಬುದು ಎಲ್ಲಿ ಮಾರಾಟದ ಕೇಂದ್ರವಾಗಿಬಿಡುತ್ತೆ ಎಂದು ಭಯವಾಗುತ್ತಿದೆ. ಆದಷ್ಟು ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವನ್ನು ಪ್ರತಿಯೊಬ್ಬ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿ ಪಣತೊಡಬೇಕಿದೆ. ಸರ್ಕಾರಿ ಶಾಲೆಗಳ ಉಳಿವು ಸರ್ಕಾರಿ ಶಾಲೆಯಲ್ಲಿ ವಿದ್ಯೆ ಪಡೆದ ವಿದ್ಯಾರ್ಥಿಗಳಿಂದಲೇ ಆಗಬೇಕಿದೆ ಎಂದು ಹಿರಿಯ ವಿದ್ಯಾರ್ಥಿಗಳಿಗೆ ನಿವೃತ್ತ ಶಿಕ್ಷಕ ಎಸ್.ಕೆ.ಹನುಮೇಗೌಡ ಕರೆಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net