ಮೇ 3ರಂದು ನೀಟ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಸೂಚನೆ

ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಧ್ಯಕ್ಷತೆಯಲ್ಲಿ ನೀಟ್ ಪರೀಕ್ಷೆ ಪೂರ್ವಸಿದ್ಧತಾ ಸಭೆ ಆಯೋಜಿಸಲಾಗಿತ್ತು.
ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಧ್ಯಕ್ಷತೆಯಲ್ಲಿ ನೀಟ್ ಪರೀಕ್ಷೆ ಪೂರ್ವಸಿದ್ಧತಾ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ
  • ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಜಿಲ್ಲೆಯಲ್ಲಿ ಮೇ 3ರಂದು ನೀಟ್(ಯುಜಿ) ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಲೋಪದೋಷವಾಗದಂತೆ ಪರೀಕ್ಷಾ ಕೇಂದ್ರಕ್ಕೆ ಮೂಲ ಸೌಕರ್ಯ ಒದಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಗದಂತೆ ನಿರಂತರ ವಿದ್ಯುತ್ ವ್ಯವಸ್ಥೆ, ಆರೋಗ್ಯ ಸಿಬ್ಬಂದಿ ಹಾಗೂ ತುರ್ತು ಸೇವೆಗಳ ನಿಯೋಜನೆ, ಪರೀಕ್ಷಾ ಕೇಂದ್ರಗಳ ಸ್ವಚ್ಛತೆ, ಪರೀಕ್ಷೆಗೆ ಹಾಜರಾಗುವ ಅಂಗವಿಕಲ ಮಕ್ಕಳಿಗೆ ಅನುಕೂಲವಾಗುವಂತೆ ವೀಲ್ಚೇರ್ ವ್ಯವಸ್ಥೆ ಹಾಗೂ ತುರ್ತು ಅಗ್ನಿಶಾಮಕ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಷ್ಟ್ರಾದ್ಯಂತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವತಿಯಿಂದ ಮೇ 3ರಂದು ನೀಟ್(ಯುಜಿ) ಪರೀಕ್ಷೆಯು ಮಧ್ಯಾಹ್ನ 2ಗಂಟೆಯಿಂದ ಸಂಜೆ 5ರವರೆಗೆ (ಅಂಗವಿಕಲ ಮಕ್ಕಳಿಗೆ ಸಂಜೆ 6ಗಂಟೆವರೆಗೆ) ನಡೆಯಲಿದೆ. ನಗರದಲ್ಲಿ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 720 ವಿದ್ಯಾರ್ಥಿಗಳು, ಪಿ.ಇ.ಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ 600 ವಿದ್ಯಾರ್ಥಿಗಳು, ಸರ್ಕಾರಿ ಮಹಿಳಾ ಕಾಲೇಜಿನಲ್ಲಿ 507 ಸೇರಿದಂತೆ ಒಟ್ಟು 1,827 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತಲುಪುವಂತೆ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಕೇಂದ್ರಕ್ಕೆ ಒರ್ವ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಪ್ರತಿ 240 ಅಭ್ಯರ್ಥಿಗಳಿಗೆ ಮೂವರು ಪೊಲೀಸ್ ಸಿಬ್ಬಂದಿ, 480 ಅಭ್ಯರ್ಥಿಗಳಿಗೆ ಆರು ಜನ ಪೊಲೀಸ್ ಸಿಬ್ಬಂದಿ, 720 ಅಭ್ಯರ್ಥಿಗಳಿಗೆ 10 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ನಿಯೋಜಿತ ಸಿಬ್ಬಂದಿ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳನ್ನು ಸೂಕ್ತ ತಪಾಸಣೆಗೆ ಒಳಪಡಿಸುವಲ್ಲಿ ನಿಯಮಾನುಸಾರ ಅಗತ್ಯ ಕ್ರಮ ವಹಿಸಬೇಕು. ಜತೆಗೆ ಪರೀಕ್ಷಾ ಗೌಪ್ಯತಾ ಬಂಡಲ್ಗಳನ್ನು ಬ್ಯಾಂಕ್‌ನಿಂದ ಕೇಂದ್ರಗಳಿಗೆ ತಲುಪಿಸುವಾಗ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಕ್ರಮ ವಹಿಸಬೇಕು. ಶೋಧನಾ ಯಂತ್ರ ಹಾಗೂ ಜಾಮರ್ ಅಳವಡಿಸಲು ಏಜೆನ್ಸಿಯವರನ್ನು ನಿಯೋಜಿಸಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಜಾಮರ್ ಅಳವಡಿಸಬೇಕು. ಮತ್ತು ಶೋಧನೆ ಮಾಡುತ್ತಿರುವ ಮಾಹಿತಿಯನ್ನು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾಡಳಿತದ ವತಿಯಿಂದ ಪರೀಕ್ಷಾ ಕೇಂದ್ರಗಳವಾರು ವೀಕ್ಷಕರು ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷಾ ದಿನದಂದು ಸೂಚಿಸಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ/ಅಶಿಸ್ತು ಪ್ರಕರಣಗಳು ಜರುಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಜಿಲ್ಲಾಮಟ್ಟದ ಸಮನ್ವಯ ಸಮಿತಿಯಿಂದ ಪರೀಕ್ಷೆಗೂ ಮುನ್ನ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಬೇಕು. ಪ್ರತಿ ಕೇಂದ್ರದಲ್ಲಿರುವ ಮೂಲ ಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಕೇಂದ್ರೀಯ ಮಹಾವಿದ್ಯಾಲಯದ ಮುಖ್ಯಸ್ಥ ಭರತ್‌ಕುಮಾರ್ ಮೀನಾ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಡಿಡಿಪಿಐ ಲೋಕೇಶ್, ಅಗ್ನಿ ಶಾಮಕದಳದ ಹಿರಿಯ ಅಧಿಕಾರಿ ರಾಘವೇಂದ್ರ, ಹಿರಿಯ ನಾಗರಿಕರ ಮತ್ತು ಅಂಗವಿಕಲ ಕಲ್ಯಾಣ ಅಧಿಕಾರಿ ಕೋಮಲ್‌ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net