ಮಂಡ್ಯ:ಜಿಲ್ಲೆಯ ಗ್ರಾಮೀಣ ಜನರ ಆರೋಗ್ಯ ಕಾಪಾಡುವ ಸಲುವಾಗಿ 2023ರಲ್ಲಿ ಪ್ರಾರಂಭವಾದ ಹೃದಯ ವೈಶಾಲ್ಯ ಯೋಜನೆಯಡಿ ಉಚಿತವಾಗಿ 31 ಸಾವಿರ ಜನರಿಗೆ ಇಸಿಜಿ ಮೂಲಕ ಹೃದಯ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷ 9 ಸಾವಿರ ಜನರಿಗೆ ಇಸಿಜಿ ಮೂಲಕ ತಪಾಸಣೆ ಮಾಡಲಾಗಿದೆ. ಜನರಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕಾದರೆ ನಗರಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ’ಹೃದಯ ವೈಶಾಲ್ಯ ಯೋಜನೆ ಜಾರಿಗೆ ತರಲಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ತಪಾಸಣೆಯನ್ನು ಗ್ರಾಮೀಣ ಜನರು ಸೂಕ್ತ ಸಮಯದಲ್ಲಿ ಮಾಡಿಸಿಕೊಳ್ಳುವುದಿಲ್ಲ. ಇದರಿಂದ ಅನಾಹುತವಾಗುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗಾಗಿ ಮಹತ್ವದ ಯೋಜನೆ ರೂಪಿಸಲಾಗಿತ್ತು ಎಂದರು.
ತಾವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಸಮಯದಲ್ಲಿ ಕಾರ್ಪೋರೇಟ್ ಸಂಸ್ಥೆಯವರ ಗಮನ ಸೆಳೆದು ಈ ಯೋಜನೆ ಅನುಷ್ಠಾನಗೊಳಿಸಿ, ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸಿಕೊಡಲಾಗಿತ್ತು. ಅಂದು 200ಕ್ಕೂ ಹೆಚ್ಚು ಇಸಿಜಿ ಯಂತ್ರಗಳನ್ನು ಉಚಿತವಾಗಿ ಕೊಟ್ಟಿದ್ದರು. ಪರಿಣಾಮ 1.50 ಲಕ್ಷಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದುಕೊಂಡಿದ್ದರು. ಅದೇ ಅನುಕೂಲವನ್ನು ಜಿಲ್ಲೆಯ ಜನರಿಗೂ ಒದಗಿಸಬೇಕೆಂಬ ಸದಾಶಯದೊಂದಿಗೆ ಯೋಜನೆ ಜಾರಿಗೊಳಿಸಲಾಗಿತ್ತು. ಹೃದಯಕ್ಕೆ ಸಂಬಂಧಿಸಿದ ಯೋಜನೆಯಾಗಿದ್ದರಿಂದ ಇದಕ್ಕೆ ಹೃದಯ ವೈಶಾಲ್ಯ ಯೋಜನೆ ಎಂಬ ಹೆಸರನ್ನಿಡಲಾಗಿತ್ತು. ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ 120 ಪ್ರಾಥಮಿಕ ಆರೋಗ್ಯ ಕೇಂದ್ರದ ಪೈಕಿ ಮೊದಲ ಹಂತದಲ್ಲಿ 35 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರ ಒದಗಿಸಲಾಗಿದೆ. ಇದನ್ನು ನಿರ್ವಹಣೆ ಮಾಡಲು ಕೇಂದ್ರದ ವೈದ್ಯರು ಸೇರಿದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ತಪಾಸಣೆಯೂ ನಡೆಯುತ್ತಿದೆ. ಜಿಲ್ಲೆಯಲ್ಲಿ 31 ಸಾವಿರ ಜನರ ಪೈಕಿ ಶೇ.5ರಷ್ಟು ಸಾರ್ವಜನಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೃದಯ ಸಂಬಂಧ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಮರೀಗೌಡ, ನಗರಸಭೆ ಪರಿಸರ ಇಂಜಿನಿಯರ್ ರುದ್ರೇಗೌಡ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ತಿಮ್ಮರಾಜು ಇತರರಿದ್ದರು.