ಭೂ ಅಕ್ರಮಕ್ಕೆ ಆಡಳಿತ, ಜನಪ್ರತಿನಿಧಿಗಳೇ ಕಾರಣ

ನಾಗಮಂಗಲ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಮತ್ತು ಜಿಪಂ ಮಾಜಿ ಸದಸ್ಯ ಕಂಚನಹಳ್ಳಿ ಬಾಲಕೃಷ್ಣ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ನಾಗಮಂಗಲ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಮತ್ತು ಜಿಪಂ ಮಾಜಿ ಸದಸ್ಯ ಕಂಚನಹಳ್ಳಿ ಬಾಲಕೃಷ್ಣ ಜಂಟಿ ಸುದ್ದಿಗೋಷ್ಠಿ ನಡೆಸಿದರು.
Published on
ನಾಗಮಂಗಲ: ತಾಲೂಕಿನಲ್ಲಿ ನಡೆಯುತ್ತಿರುವ ಭೂ ಅಕ್ರಮಗಳಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಜನಪ್ರತಿನಿಧಿಗಳೇ ಕಾರಣರಾಗಿದ್ದಾರೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಮತ್ತು ಜಿಪಂ ಮಾಜಿ ಸದಸ್ಯ ಕಂಚನಹಳ್ಳಿ ಬಾಲಕೃಷ್ಣ ಹೇಳಿದರು.
ತಾಲೂಕಿನ ಕೆಲ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಸಾವಿರಾರು ಎಕರೆ ಸರ್ಕಾರಿ ಮತ್ತು ಗೋಮಾಳವನ್ನು ಕುಟುಂಬಸ್ಥರ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ಭೂ ಮಂಜೂರಾತಿ ಕಡತಗಳಲ್ಲಿ ಅರ್ಜಿದಾರರು ಮತ್ತು ಅಧಿಕಾರಿಗಳ ಸಹಿಯನ್ನೂ ನಕಲು ಮಾಡಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಈ ಹೋರಾಟಕ್ಕೆ ತಾಲೂಕಿನಲ್ಲಿ ಆಸಕ್ತರು ಕೈಜೋಡಿಸಬೇಕೆಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಅಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಶ್ರೀಮಂತರು ಹಾಗೂ ಮಧ್ಯವರ್ತಿಗಳು ಶಾಮೀಲಾಗಿದ್ದಾರೆ. ಇದರಿಂದಾಗಿ ನಿಜವಾದ ಬಡವರಿಗೆ ಸಿಗಬೇಕಾದ ಜಮೀನು ಸಿಕ್ಕಿಲ್ಲ, ಅಲ್ಲದೇ ಕೆಲವರಿಗೆ ಮಂಜೂರಾಗಿದ್ದ ಜಮೀನಿನ ಮೇಲೆಯೂ ಅಕ್ರಮವಾಗಿ ದಾಖಲೆ ಸೃಷ್ಟಿಸಿದ್ದಾರೆ. ಇವೆಲ್ಲವನ್ನು ಕಣ್ಣಾರೆ ಕಂಡರೂ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ದೂಷಿಸಿದರು.
ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ತಾಲೂಕು ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ಭೂ ಕಬಳಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ, ಈವರೆಗೂ ಯಾರೊಬ್ಬರ ವಿರುದ್ಧ ಕ್ರಮವಾಗಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದ ಜಮೀನನ್ನೂ ಸರ್ಕಾರ ವಶಕ್ಕೆ ಪಡೆದುಕೊಂಡಿಲ್ಲ. ಇದರ ಬೆನ್ನಲ್ಲೇ ತಾಲೂಕು ಆಡಳಿತ ಸೌಧದ ಮುಂಭಾಗದ ಕಸದ ತೊಟ್ಟಿಯಲ್ಲಿ ಭೂದಾಖಲೆಗಳು ಪತ್ತೆಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ನಡೆದಿರುವ ಭೂ ಕಬಳಿಕೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಸಾಕಷ್ಟು ದಾಖಲೆಗಳಿವೆ. ನಾವು ನಡೆಸುವ ಕಾನೂನು ಹೋರಾಟಕ್ಕೆ ಜನಸಾಮಾನ್ಯರು, ನಿವೃತ್ತ ನೌಕರರು, ಸಂಘ ಸಂಸ್ಥೆಯವರು ಹಾಗೂ ತಾಲೂಕಿನ ಹಿತಚಿಂತಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net