ರೈತರು ನೇರ ಮಾರಾಟ ಮಾಡಿದರೆ ಅಧಿಕ ಲಾಭ

ನಾಗಮಂಗಲ ತಾಲೂಕಿನ ಆರಣಿ ಗ್ರಾಮದಲ್ಲಿ ಆಯೋಜಿಸಿದ್ದ ಜಲಾನಯನ ಮೇಳಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಎತ್ತಿನ ಗಾಡಿ ಮೂಲಕ ಮೆರವಣಿಗೆಯಲ್ಲಿ ಆಗಮಿಸಿದರು.
ನಾಗಮಂಗಲ ತಾಲೂಕಿನ ಆರಣಿ ಗ್ರಾಮದಲ್ಲಿ ಆಯೋಜಿಸಿದ್ದ ಜಲಾನಯನ ಮೇಳಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಎತ್ತಿನ ಗಾಡಿ ಮೂಲಕ ಮೆರವಣಿಗೆಯಲ್ಲಿ ಆಗಮಿಸಿದರು.
Published on
ನಾಗಮಂಗಲ: ರೈತರು ಬೆಳೆಯುವ ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಯಲ್ಲಿ ನೇರ ಮಾರಾಟ ಮಾಡಿದರೆ ಅಧಿಕ ಲಾಭ ಪಡೆಯಬಹುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಆರಣ ಗ್ರಾಮದಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆ ವತಿಯಿಂದ ಆಯೋಜಿಸಿದ್ದ ಜಲಾನಯನ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ ಹಾಗೂ ಭೂ ಸಂಪನ್ಮೂಲಗಳ ಸಮರ್ಥ ಬಳಕೆಗೆ ಜಲಾನಯನ ಯೋಜನೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಕಳೆದ ಮರ‌್ನಾಲ್ಕು ದಶಕಗಳ ಹಿಂದೆ ನಮ್ಮ ರಾಜ್ಯದ ರೈತರು 70 ಲಕ್ಷ ಮೆಟ್ರಿಕ್ ಟನ್‌ನಷ್ಟು ಬೆಳೆ ಬೆಳೆಯುತ್ತಿದ್ದ ಸಂದರ್ಭದಲ್ಲಿ ಹೊರ ರಾಜ್ಯ, ದೇಶಗಳಿಂದ ಆಹಾರ ಪದಾರ್ಥ ಖರೀದಿಸಬೇಕಿತ್ತು. ಆದರೆ ಈಗ 160 ಲಕ್ಷ ಮೆಟ್ರಕ್ ಟನ್‌ನಷ್ಟು ಆಹಾರ ಪದಾರ್ಥಗಳನ್ನು ಬೆಳೆದು ಹೊರ ದೇಶಗಳಿಗೂ ರಫ್ತು ಮಾಡುತ್ತಿದ್ದೇವೆ. ಉತ್ಪಾದನೆ ಹೆಚ್ಚಾದಂತೆ ಆದಾಯ ರೂಪ ಕಂಡುಕೊಳ್ಳದಿದ್ದರೆ ರೈತರು ಸಾಲವಂತರಾಗಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ರೈತರು ಬೆಳೆಯುವ ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಯಲ್ಲಿ ನೇರ ಮಾರಾಟ ಮಾಡಿದರೆ ಅಧಿಕ ಲಾಭ ಪಡೆಯಬಹುದೆಂಬ ಕಾರಣಕ್ಕೆ ನಾನು ಕೃಷಿ ಸಚಿವನಾದ ನಂತರ ಇಡೀ ರಾಷ್ಟ್ರದಲ್ಲಿ ಮೊದಲ ಬಾರಿಗೆ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಸಿಪಿಐ ಹೇಮಂತ್‌ಕುಮಾರ್, ಬೆಳ್ಳೂರು ಠಾಣೆಯ ಪಿಎಸ್‌ಐ ವೈ.ಎನ್.ರವಿಕುಮಾರ್, ಪಾಂಡವಪುರ ಉಪ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಕೃಷಿ ಅಧಿಕಾರಿ ರೆಡ್ಡಿ ಶೇಖರ್, ಹರಿಪ್ರಸಾದ್ ಪುರೋಹಿತ್, ರಾಜ್ಯ ಸಾವಯವ ಕೃಷಿ ಉನ್ನತ ಸಮಿತಿಯ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ರೈತ ಮುಖಂಡ ರಂಗೇಗೌಡ, ಸತ್ಯಣ್ಣ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net