ಮಳವಳ್ಳಿ ತಾಲೂಕಿನ ಕೆಂಬೂತಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ದ್ವತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವದಲ್ಲಿ ಶಿವಕುಮಾರ್ ಮಾತನಾಡಿದರು. ಬಸವರಾಜಮ್ಮ, ಸ್ವಾಮಿಗೌಡ, ಕಿರಣ್ ಘಟ್ಟಗೆ, ಬಿ.ಆರ್.ಕಿರಣ್, ಎಸ್.ವಿ.ನರಸಿಂಹಯ್ಯ ಇದ್ದರು.
ಮಳವಳ್ಳಿ: ರೇಷ್ಮೆ ಕೃಷಿ ರಾಜ್ಯದ ಪ್ರಮುಖ ಕೃಷಿ ಆಧಾರಿತ ಉದ್ಯೋಗವಾಗಿದ್ದು, ರೇಷ್ಮೆ ಹುಳು ಸಾಕಣೆಯಿಂದ ರೈತರು ಹೆಚ್ಚು ಆದಾಯ ಪಡೆಯಬಹುದಾಗಿದೆ ಎಂದು ವಿಜ್ಞಾನಿ ಡಾ.ಶಿವಕುಮಾರ್ ತಿಳಿಸಿದರು.
ತಾಲೂಕಿನ ಕೆಂಬೂತಗೆರೆ ಗ್ರಾಮದಲ್ಲಿ ರೇಷ್ಮೆ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಲು ರೇಷ್ಮೆ ಕೃಷಿ ಸಹಕಾರಿಯಾಗಿದೆ. ಸಮರ್ಪಕವಾಗಿ ರೇಷ್ಮೆ ಉಳು ಸಾಕಣೆ ಬಗ್ಗೆ ಇಲಾಖೆ ತಜ್ಞರಿಂದ ಪಡೆದು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು. ಜತೆಗೆ ರೇಷ್ಮೆ ಬೆಳೆಯನ್ನು ಕ್ರಮಬದ್ಧವಾಗಿ ಬೆಳೆದರೆ ನಾಲ್ಕರಿಂದ ಐದು ಬಾರಿ ಬೆಳೆ ತೆಗೆದು ಲಕ್ಷಾಂತರ ರೂ. ಸಂಪಾದಿಸಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ರೇಷ್ಮೆ ಕೃಷಿಯಲ್ಲಿ ತಂತ್ರಜ್ಞಾನ ಬಳಸುವುದರ ಜತೆಗೆ ರೇಷ್ಮೆಯಲ್ಲಿ ಹಲವು ತಳಿಯನ್ನು ಪರಿಚಯಿಸಲಾಗಿದೆ. ಒಬ್ಬರೇ 100 ರಿಂದ 200 ಮೊಟ್ಟೆಯ ಮರಿಗಳನ್ನು ಮೇಯಿಸುವ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ರೈತರಿಗೆ ರಿಯಾಯಿತಿ ದರದಲ್ಲಿ ರೇಷ್ಮೆ ಸಾಕಣೆ ಮನೆ, ಸಲಕರಣೆಗಳನ್ನು ನೀಡುವ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಗಸನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವರಾಜಮ್ಮ, ಸದಸ್ಯ ಸ್ವಾಮಿಗೌಡ, ರೇಷ್ಮೆ ಇಲಾಖೆ ಅಧಿಕಾರಿಗಳಾದ ಕಿರಣ್ ಘಟ್ಟಗೆ, ಬಿ.ಆರ್.ಕಿರಣ್, ವಿಸ್ತರಣಾಧಿಕಾರಿ ಎಸ್.ವಿ ನರಸಿಂಹಮೂರ್ತಿ, ರೈತ ಮುಖಂಡರಾದ ಶಿವಲಿಂಗೇಗೌಡ, ರಾಜಶೇಖರ್, ರಮೇಶ್, ಗೋಪಾಲ್ ಇತರರಿದ್ದರು.