ಮಕ್ಕಳ ಭವಿಷ್ಯಕ್ಕೆ ಮೊಬೈಲ್ ಮಾರಕ

ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವ ನಡೆಯಿತು. ವೈ.ಕೆ.ತಿಮ್ಮೇಗೌಡ, ಮಲ್ಲಿಕಾರ್ಜುನ, ಡಾಲು ರವಿ, ಎಚ್.ಟಿ.ಲೋಕೇಶ್, ಕವಿತಾ ರವಿ, ಈ.ರಾಜು, ದೇವರಾಜು ಇತರರು ಇದ್ದರು.
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವ ನಡೆಯಿತು. ವೈ.ಕೆ.ತಿಮ್ಮೇಗೌಡ, ಮಲ್ಲಿಕಾರ್ಜುನ, ಡಾಲು ರವಿ, ಎಚ್.ಟಿ.ಲೋಕೇಶ್, ಕವಿತಾ ರವಿ, ಈ.ರಾಜು, ದೇವರಾಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಅಭಿಮತ
  • ಶಾಲಾ ವಾರ್ಷಿಕೋತ್ಸವ
ಕಿಕ್ಕೇರಿ: ಓದುವ ಮನಸ್ಸಿಗೆ ವಾರ್ಷಿಕೋತ್ಸವದಂತಹ ಶಾಲಾ ಹಬ್ಬಗಳು ಉಲ್ಲಾಸ ನೀಡಲಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ತಿಳಿಸಿದರು.
ಹೋಬಳಿಯ ಸಾಸಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಕೋವಿಡ್ ವೇಳೆ ಮೊಬೈಲ್ ತರಗತಿ ಅನಿವಾರ್ಯವಾಗಿತ್ತು. ಆದರೆ ಈಗ ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆರ್‌ಟಿಒ ಅಧಿಕಾರಿಗಳ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಶಿಕ್ಷಣಕ್ಕೆ ಪೂರಕ ಶಕ್ತಿಯಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಇದೆ. ಇಂತಹ ಚಟುವಟಿಕೆ ಇಲ್ಲವಾದಲ್ಲಿ ಮೆದುಳು ಜಡ್ಡುಗಟ್ಟಲಿದೆ. ಸತತ ಓದು ಭವಿಷ್ಯದ ಮೆಟ್ಟಿಲು. ಎಲ್ಲ ಪರಿಕರಗಳು ಸುಲಭವಾಗಿ ಸಿಗಲಿದೆ. ಇದರ ಆಯ್ಕೆಯಲ್ಲಿ ಎಚ್ಚರಿಕೆ ಇರಬೇಕು. ದಿನದ 24ಗಂಟೆಗಳಲ್ಲಿ ಹೆಚ್ಚಿನ ಸಂಪರ್ಕದಲ್ಲಿರುವುದು ಮಕ್ಕಳು ತಾಯಿ ಜತೆ. ತಿದ್ದಿ ಹೇಳುವ ಕೆಲಸವನ್ನು ಮನೆಗಳಿಂದ ಆಗಬೇಕಿದೆ ಎಂದರು.
ಓದು, ಬರೆಯುವ ಮಕ್ಕಳ ಕೈಗೆ ಮೊಬೈಲ್ ಬೇಡ. ಭವಿಷ್ಯ ರೂಪಿಸುವ ಬದಲು ಬದುಕು ಕಿತ್ತುಕೊಳ್ಳಲಿದೆ. ಊಟ ಬೇಡ ಎನ್ನುವ ಅಳುವ ಮಕ್ಕಳನ್ನು ಸುಮ್ಮನಿರಿಸಲು ಮೊಬೈಲ್ ಕೊಟ್ಟು ಭವಿಷ್ಯದಲ್ಲಿ ಮಕ್ಕಳನ್ನು ಪಾಲಕರೆ ಅಳುವಂತೆ ಮಾಡಬೇಕಾಗಲಿದೆ. ಮೊಬೈಲ್ ಬದಲು ವರ್ಣರಂಜಿತ ಬೊಂಬೆಗಳಿರುವ ಪುಸ್ತಕ ಕೊಡಿ. ಮೊಬೈಲ್‌ನಿಂದ ಖಂಡಿತಾ ಪರಿವರ್ತನೆಯಾಗಲಿದ್ದಾರೆ ಎಂದು ಹೇಳಿದರು.
ಮನ್‌ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ಸರ್ಕಾರಿ ಶಾಲೆ, ಕನ್ನಡ ಶಾಲೆ ಬಹುತೇಕ ಮುಚ್ಚುತ್ತಿವೆ. ಇದು ಬಡಮಕ್ಕಳ, ಕನ್ನಡ ಭಾಷೆ ಉಳಿವಿಗೆ ದೊಡ್ಡ ಪೆಟ್ಟಾಗಲಿದೆ. ಸರ್ಕಾರಿ ಶಾಲೆಯಲ್ಲಿ ಓದಿದವರು ದೊಡ್ಡ ಹುದ್ದೆ, ಮೇಧಾವಿಗಳಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಈಗಿರುವಾಗ ಖಾಸಗಿ ಶಾಲೆ ವ್ಯಾಮೋಹ ಬಿಡಿ. ಪ್ರತಿಷ್ಟೆಗಾಗಿ ಓದು ಇರಲಿ. ಇದು ಸರ್ಕಾರಿ ಶಾಲೆಯಲ್ಲಿ ಖಂಡಿತವಾಗಿ ಸಿಗಲಿದೆ ಎಂದು ನುಡಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಆಕರ್ಷಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದು ಎಲ್ಲರ ಮನರಂಜಿಸಿತು.
ಇಸಿಒ ನವೀನ್‌ಕುಮಾರ್, ಸಿಆರ್‌ಪಿ ಮಹೇಶ್, ಐಕನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಕವಿತಾ ರವಿ, ಸದಸ್ಯರಾದ ಈರಾಜು, ದೇವರಾಜು, ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ. ಲೋಕೇಶ್, ಎಸ್‌ಡಿಎಂಸಿ ಸದಸ್ಯರು, ಮುಖ್ಯ ಶಿಕ್ಷಕರಾದ ಕುಮಾರಸ್ವಾಮಿ, ಕೆ.ಟಿ.ಹೇಮಣ್ಣ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net