ಅವಳಿ ಗ್ರಾಮದ ಕೆರೆ ಅಭಿವೃದ್ಧಿಗೆ ಡಿಪಿಆರ್: ಶಾಸಕ ಪಿ.ರವಿಕುಮಾರ್ ಗಣಿಗ ಮಾಹಿತಿ

ಮಂಡ್ಯ ತಾಲೂಕು ಹೊಸಬೂದನೂರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.
ಮಂಡ್ಯ ತಾಲೂಕು ಹೊಸಬೂದನೂರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹೊಸಬೂದನೂರಿನಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
  • ಕೆರೆ ಅಭಿವೃದ್ಧಿಗೆ 25 ಕೋಟಿ ರೂ ವೆಚ್ಚ
ಮಂಡ್ಯ: ಅವಳಿ ಗ್ರಾಮಗಳಾದ ಹೊಸಬೂದನೂರು ಹಾಗೂ ಹಳೇ ಬೂದನೂರು ಗ್ರಾಮದ ಕೆರೆಯನ್ನು 25 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಐದು ಕೋಟಿ ರೂ ವೆಚ್ಚದ ಸೇತುವೆ, ಕೆರೆ ಕೋಡಿ ನಿರ್ಮಾಣ ಹಾಗೂ ಕೆರೆ ಏರಿ ಮೇಲಿನ ರಸ್ತೆ ಅಭಿವೃದ್ಧಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೆರೆಯ ಹೂಳನ್ನು ತೆಗೆಸಿ ಬೋಟಿಂಗ್ ವ್ಯವಸ್ಥೆ ಮಾಡಿ ಪ್ರವಾಸಿತಾಣವಾಗಿ ಮಾಡಲಾಗುವುದು. ಇದರಿಂದ ವಾಣಿಜ್ಯ ಕೇಂದ್ರವಾಗಲಿದೆ. ಟೆಂಡರ್ ನಂತರ ಕೆರೆಯ ನೀರನ್ನು ಖಾಲಿ ಮಾಡಿ ನವೆಂಬರ್ ಅಥವಾ ಜನವರಿ ತಿಂಗಳಲ್ಲಿ ಕೆಲಸ ಪ್ರಾರಂಭಿಸಲಾಗುವುದು. ಇದರಿಂದ ಕೆರೆ ವ್ಯಾಪ್ತಿಯ ಒಂದು ಬೆಳೆಗೆ ತೊಂದರೆಯಾಗಬಹುದು. ಇದಕ್ಕೆ ರೈತರ ಸಂಪೂರ್ಣ ಸಹಕಾರ ಬೇಕು ಎಂದು ಮನವಿ ಮಾಡಿದರು.
ಹೊಸಬೂದನೂರು ಗ್ರಾಮದ ಕೆರೆ ಕೋಡಿ ಹೊಡೆದ ಸಂದರ್ಭ ತಾತ್ಕಾಲಿಕವಾಗಿ ಒಂದು ಕೋಡಿಯನ್ನು ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ಕಾವೇರಿ ನೀರಾವರಿ ನಿಗಮದಿಂದ 5 ಕೋಟಿ ರೂ ಬಿಡುಗಡೆಯಾಗಿದೆ. ಈಗ ಇರುವ ಸೇತುವೆ ಕಿರಿದು ಹಾಗೂ ಶಿಥಿಲವಾಗಿರುವುದರಿಂದ ಹೊಸದಾಗಿ ನಿರ್ಮಾಣ ಮಾಡಲಾಗುವುದು. ಅಲ್ಲದೆ, ಕೆರೆ ಏರಿ ಮೇಲಿನ ರಸ್ತೆಯನ್ನು ಹೊಸಬೂದನೂರಿನಿಂದ ಹಳೇಬೂದನೂರುವರೆಗೂ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ಈಗಾಗಲೇ ಕಾವೇರಿ ನೀರಾವರಿ ನಿಗಮದಿಂದ ಎರಡೂ ಅವಳಿ ಗ್ರಾಮಗಳಲ್ಲಿ 15 ಕೋಟಿ ರೂ.ಗಳ ಕೆಲಸ ಶೇ.90ರಷ್ಟು ಮುಗಿದಿದೆ. ಈ ಐದು ಕೋಟಿ ರೂ ಸೇರಿ ಒಟ್ಟು 20 ಕೋಟಿ ರೂ ನೀಡಲಾಗಿದೆ. ಕೆ.ಆರ್.ಎಸ್ ಡ್ಯಾಂನಿಂದ ನಿಮ್ಮ ಊರಿನ ನಾಲೆಗೆ ನೀರು ಬರಲು ಎರಡು ದಿನ ಬೇಕಾಗಿತ್ತು. ಪ್ರಸ್ತುತ 8 ಗಂಟೆಗಳಲ್ಲಿ ನಿಮ್ಮ ಊರಿಗೆ ನೀರು ತಲುಪುವಂತೆ ಕಾಮಗಾರಿ ನಡೆಸಲಾಗಿದೆ. ಇತಿಹಾಸದಲ್ಲಿ 20 ಕೋಟಿ ರೂ.ಗಳನ್ನು ನಾಲೆ, ಕೆರೆ ಅಭಿವೃದ್ಧಿಗೆ ಹೊಸಬೂದನೂರು ಮತ್ತು ಹಳೇಬೂದನೂರು ಗ್ರಾಮಗಳಿಗೆ ನೀಡಿರಲಿಲ್ಲ. ಮುಂದೆ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ನಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಇಲ್ಲಿ ಸೇರಿರುವವರು ನಿಮ್ಮ ಕುಟುಂಬದವರಿಗೂ ತಿಳಿಸಿ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ರಘು, ನಿರ್ದೇಶಕ ಬಿ.ಎಸ್.ಮಂಜು, ಗ್ರಾಪಂ ಮಾಜಿ ಉಪಾಧ್ಯಕ್ಷೆ ಶಿಲ್ಪಾ, ಮಾಜಿ ಸದಸ್ಯರಾದ ಕೆಂಪೇಗೌಡ, ಶಿವಲಿಂಗ, ಮುಖಂಡರಾದ ಚಂದ್ರಪ್ಪ, ಬಿ.ಟಿ.ಜಯಶಂಕರ್, ಬಿ.ಎಸ್.ರವಿಕುಮಾರ್, ರಾಮರಾಜು, ಶಿವಲಿಂಗಣ್ಣ, ಚೈತ್ರೇಶ್, ರಾಜಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net