ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ತಪ್ಪಲಿನ ಚಿಕ್ಕದೇವರಾಯಸಾಗರ ನಾಲೆಯ ಬಳಿ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರು ಅಧಿಕಾರಿಗಳೊಂದಿಗೆ ನಾಲೆಯಲ್ಲಿನ ರಂದ್ರಗಳು ಹಾಗೂ ನೀರು ಪೋಲಾಗುವ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದರು. ಎಇಇ ಶಿವಪ್ರಸಾದ್, ಎಇ ಹೊನ್ನೋಜಿರಾವ್, ಕುಮಾರಸ್ವಾಮಿ, ಭಾನು ಇದ್ದರು.
ಶ್ರೀರಂಗಪಟ್ಟಣ: ಕ್ಷೇತ್ರದ ರೈತಾಪಿ ಜನರು ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ನಾಲೆಗಳಿಂದ ಕಾವೇರಿ ನೀರು ಪೋಲಾಗದಂತೆ ತಲುಪಿ ಸಮೃದ್ಧ ಕೃಷಿಗೆ ನೆರವಾಗಲು ರಾಜ್ಯ ಸರ್ಕಾರ 100 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದೆ ಎಂದು ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ತಾಲೂಕಿನ ಗೆಂಡೆಹೊಸಹಳ್ಳಿ, ಕರೀಘಟ್ಟ, ಅಲ್ಲಾಪಟ್ಟಣ, ನೀಲನಕೊಪ್ಪಲು, ಎಂ.ಶೆಟ್ಟಹಳ್ಳಿ ಹಾಗೂ ಕಡತನಾಳು ಗ್ರಾಮಗಳ ವ್ಯಾಪ್ತಿಯಲ್ಲಿ ಚಿಕ್ಕದೇವರಾಯಸಾಗರ(ಸಿಡಿಎಸ್) ನಾಲೆ ಹಾಗೂ ವಿಶ್ವೇರಯ್ಯ(ವಿ.ಸಿ)ನಾಲೆಗಳ ಸಂಪರ್ಕ ಮತ್ತು ಪಿಕಪ್ ನಾಲೆಗಳ ಆಧುನೀಕರಣ, ದುರಸ್ತಿ ಸೇರಿದಂತೆ ಸೇತುವೆ ನಿರ್ಮಾಣದ ಸುಮಾರು 20 ಕೋಟಿ ರೂ.ಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕನ್ನಂಬಾಡಿ ಜಲಾಶಯದಿಂದ ಹರಿದ ನೀರು ನಾಲೆಗಳಲ್ಲಿನ ಲೋಪದೋಷಗಳ ಕಾರಣ ಜಮೀನು ಸೇರುವಲ್ಲಿ ವ್ಯತ್ಯಯ ಹಾಗೂ ಪೋಲಾಗುತ್ತಿತ್ತು. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದರಿಂದ ಸಹಕಾರ ನೀಡಿದ್ದಾರೆ. ತಾಲೂಕಿನ ಗೆಂಡೆಹೊಸಹಳ್ಳಿ ಕೆರೆಯ ತೂಬುನಾಲೆ ಮತ್ತು ದಮ್ಮನಕಟ್ಟೆ ರಸ್ತೆ ಅಭಿವೃದ್ಧಿ ಈ ಭಾಗದ ಗ್ರಾಮಗಳ ಜನರ ಬಹುದಿನಗಳ ಬೇಡಿಕೆಯಾಗಿದ್ದು ಚಾಲನೆ ನೀಡಲಾಗಿದೆ. ಅಂತೆಯೇ ಕೆ.ಶೆಟ್ಟಹಳ್ಳಿ ಮತ್ತು ಎಂ.ಶೆಟ್ಟಹಳ್ಳಿ ಗ್ರಾಮಗಳ ನಡುವಿನ ರಾಮಚಾರಿ ಪಿಕಪ್ ನಾಲೆಯ ಅಭಿವೃದ್ಧಿ, ಕರಿಘಟ್ಟ ಬಳಿ ಸಿಡಿಎಸ್ ನಾಲೆಗೆ ಅಡ್ಡಲಾಗಿ ಸೇತುವೆ ನಿರ್ಮಾಣ, ಅಲ್ಲಾಪಟ್ಟಣ, ಟಿ.ಎಂ.ಹೊಸೂರು, ನೀಲನಕೊಪ್ಪಲು ಮತ್ತು ಗೌಡಹಳ್ಳಿ ಗ್ರಾಮಗಳ ವ್ಯಾಪ್ತಿಯ ಬ್ರಾೃಂಚ್ ನಾಲೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ತಾಲೂಕಿನ ಮರಳಗಾಲ ಗ್ರಾಮದ ಬಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯ ಬಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಕಾವೇರಿ ನೀರಾವರಿ ನಿಗಮ ಪಾಂಡವಪುರ ವಿಭಾಗದ ಎಇಇ ಶಿವಪ್ರಸಾದ್, ಎಇ ಹೊನ್ನೋಜಿರಾವ್, ಕುಮಾರಸ್ವಾಮಿ, ಭಾನು, ಎಸ್.ಎಲ್.ಲಿಂಗರಾಜು, ಗಂಗಾಧರ್, ಬಾಲಕೃಷ್ಣ, ಗ್ರಾಪಂ ಮಾಜಿ ಸದಸ್ಯ ಸುಜಯ್, ಕುಮಾರ್, ಶ್ರೀಧರ್, ಪದ್ಮರಾಜ್, ಯೋಗೇಶ್ ಉಪಸ್ಥಿತರಿದ್ದರು.