ಎಚ್ಐವಿ ಸೋಂಕಿತರಲ್ಲಿ ಆತ್ಮಸ್ಥೈರ್ಯ ಮೂಡಿಸಿ: ಎಡಿಸಿ ಬಿ.ಸಿ.ಶಿವಾನಂದಮೂರ್ತಿ ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎಚ್ಐವಿ ಸೋಂಕಿಗೆ ಸಂಬಂಧಿಸಿದ ಕ್ಯೂ ಆರ್ ಕೋಡ್ ಫೋಸ್ಟರ್ ಬಿಡುಗಡೆ ಮಾಡಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎಚ್ಐವಿ ಸೋಂಕಿಗೆ ಸಂಬಂಧಿಸಿದ ಕ್ಯೂ ಆರ್ ಕೋಡ್ ಫೋಸ್ಟರ್ ಬಿಡುಗಡೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಮಿಷನ್ ಏಡ್ಸ್ ಸುರಕ್ಷಾ ಸಭೆ
  • ಕ್ಯೂ ಆರ್ ಕೋಡ್ ಬಿಡುಗಡೆ
ಮಂಡ್ಯ: ಎಚ್. ಐ. ವಿ. ಲಕ್ಷಣಗಳನ್ನು ಗುರುತಿಸಿ ಸೋಂಕಿತರಿಗೆ ಆತ್ಮಸ್ಥೈರ್ಯದ ಜತೆಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಹಾಗೂ ಶಾಲಾ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಎಚ್‌.ಐ.ವಿ ಪೀಡಿತರಿಗೆ ತಾರತಮ್ಯವಿಲ್ಲದೆ ಬದುಕಲು ಸಹಾಯ ಮಾಡುವುದು, ಉದ್ಯೋಗ ಮತ್ತು ಶಿಕ್ಷಣಕ್ಕೆ ಬೆಂಬಲ ನೀಡಬೇಕು ಧೈರ್ಯ ತುಂಬುವಂತ ಕೆಲಸ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಮಿಷನ್ ಏಡ್ಸ್ ಸುರಕ್ಷಾ ಕಾರ್ಯಕ್ರಮದ ಪ್ರಗತಿ ಅನುಷ್ಠಾನದ ಸಮರ್ಪಕ ಮೇಲ್ವಿಚಾರಣೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಿಷನ್ ಏಡ್ಸ್ ಸುರಕ್ಷಾ ಕಾರ್ಯಕ್ರಮದ ಗುರಿಗಳನ್ನು ಜಿಲ್ಲಾ ಮಟ್ಟದಲ್ಲಿ ಸಾಧಿಸುವ ನಿಟ್ಟಿನಲ್ಲಿ ಮೊದಲನೇ 95 ಎಚ್.ಐ.ವಿ ಸೋಂಕಿತ ವ್ಯಕ್ತಿಗಳು ತಮ್ಮ ಸೋಂಕಿನ ಸ್ಥಿತಿಯನ್ನು ತಿಳಿದುಕೊಂಡಿದ್ದಾರೆ. ಹಾಗೂ ಎರಡನೆ ಹಂತದಲ್ಲಿ 95ರಷ್ಟು ಸೋಂಕು ಧೃಡಪಟ್ಟವರಲ್ಲಿ ಶೇ.95ರಷ್ಟು ಜನರು ನಿರಂತರ ಎಆರ್‌ಟಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಮೂರನೆ ಹಂತದಲ್ಲಿ ಎಆರ್‌ಟಿ ಚಿಕಿತ್ಸೆಯಲ್ಲಿ ಇರುವವರು ಶೇ.99ರಷ್ಟು ಜನರಲ್ಲಿ ವೈರಲ್ ಲೋಡ್ ನಿಯಂತ್ರಣ ಸಾಧಿಸಲಾಗಿದೆ. ಮಾತ್ರವಲ್ಲದೆ ಎಚ್ .ಐ.ವಿ ಸಿಫಿಲಿಸ್ ಹೆಪಟೈಟೆಸ್-ಬಿ ರೋಗಗಳ ತಾಯಿಯಿಂದ ಮಗುವಿಗೆ ಹರಡುವಿಕೆಯನ್ನು ಶೂನ್ಯಗೊಳಿಸಲಾಗಿದೆ ಎಂದು ತಿಳಿಸಿದರು.
ರೋಗದ ಬಗ್ಗೆ ಇಂದಿಗೂ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳು ಇದೆ. ಪರಿಣಾಮ ಅವರನ್ನ ಕೀಳಾಗಿ ನೋಡುವುದು ಕಂಡುಬರುತ್ತಿದೆ. ಈ ತಪ್ಪು ಕಲ್ಪನೆಗಳನ್ನು ನಿವಾರಿಸಲು ಮತ್ತು ಜಾಗೃತಿ ಮೂಡಿಸಲು ಅರಿವು ಕಾರ್ಯಕ್ರಮ ಮಾಡಬೇಕು. ರೋಗವನ್ನು ತಡೆಗಟ್ಟುವಿಕೆ ಮತ್ತು ಸೋಂಕಿತರಿಗೆ ಮಾನವೀಯತೆ ತೋರಿಸುವುದೇ ಮುಖ್ಯ ಉದ್ದೇಶವಾಗಿದ್ದು, ಸೋಂಕಿತರಿಗೆ ಮನವೊಲಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಡಿಸೆಂಬರ್ ಅಂತ್ಯದವರೆಗೆ ಎಲ್ಲ ಸೋಂಕಿತರ ವಿವರ ಪಡೆದು ಚಿಕಿತ್ಸೆ ಪಡೆಯಬೇಕು. ಜತೆಗೆ ಸೋಂಕಿತರ ಮನೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ತಿಳಿಯಬೇಕು. ಸುರಕ್ಷಿತ ಲೈಂಗಿಕತೆ (ಕಾಂಡೋಮ್ ಬಳಕೆ) ಮತ್ತು ಎಚ್‌ಐವಿ ತಡೆಗಟ್ಟುವಿಕೆಯ ಬಗ್ಗೆ ಶಾಲೆ, ಕಾಲೇಜು ಮತ್ತು ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದು. ಉಚಿತ ಪರೀಕ್ಷೆ ಮತ್ತು ಸಮಾಲೋಚನೆ ಮಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು.
ಸೋಂಕಿತರಿಗೆ ಜೀವಿತಾವಧಿಯವರೆಗೆ ಉಚಿತ ಎಆರ್‌ಟಿ ಔಷಧ ಒದಗಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ವೈರಸ್ ಹರಡುವಿಕೆಯನ್ನು ತಡೆಯುವುದು. ಹಾಗೂ ತಾಯಿಯಿಂದ ಮಗುವಿಗೆ ಹರಡುವಿಕೆ ತಡೆಯುವುದು, ಗರ್ಭಿಣಿಯರಲ್ಲಿ ಸೋಂಕು ಪತ್ತೆಹಚ್ಚಿ ಮಗುವಿಗೆ ಹರಡದಂತೆ ಕ್ರಮ ವಹಿಸಬೇಕು. ಮಿಷನ್ ಸುರಕ್ಷಾ ಅಭಿಯಾನದ ಅಂಗವಾಗಿ ಕ್ಯೂಆರ್ ಕೋಡ್ ಅನ್ನು ಸ್ಥಾಪಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎನ್.ಆಶಾಲತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಶ್ರೀನಿವಾಸ್, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಆಶಾ, ಟಿಎಚ್ಒ ಡಾ.ಜವರೇಗೌಡ, ವೀರಭದ್ರಪ್ಪ, ಡಾ. ಭವಾನಿ ಶಂಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net