ಮಳವಳ್ಳಿ ತಾಲೂಕಿನ ಬುಗತಗಹಳ್ಳಿ ಬಳಿಯ ಕಲ್ಯಾಣ ಮಂಟಪವೊಂದರಲ್ಲಿ ಶುಕ್ರವಾರ ನಡೆದ ಸಿಪಿಐಎಂ ಪಕ್ಷದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿದರು. ಎನ್.ಕೆ.ವಸಂತರಾಜ್, ವಿಜಯ್ ಕುಮಾರ್, ಎನ್.ಎಲ್.ಭರತ್ ರಾಜ್, ಸಿ.ಕುಮಾರ್, ಬಿ.ಹನುಮೇಶ, ಲಿಂಗರಾಜಮೂರ್ತಿ ಇದ್ದರು.
ಮಳವಳ್ಳಿ: ಪ್ರಸ್ತುತ ಮನುಷ್ಯರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಕಾನೂನು ರೂಪಿಸುತ್ತಿರುವ ಸಚಿವಾಲಯಗಳೇ ಕಾರಣ. ಹಾಗಾಗಿ ನಮ್ಮ ಪಾದಯಾತ್ರೆ ಹೋಗಬೇಕಾಗಿರುವುದು ದೇವಾಲಯಕ್ಕೆ ಅಲ್ಲ ಸಚಿವಾಲಯಕ್ಕೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.
ತಾಲೂಕಿನ ಬುಗತಗಹಳ್ಳಿ ಸಮೀಪದ ಕಲ್ಯಾಣ ಮಂಟಪವೊಂದರಲ್ಲಿ ಶುಕ್ರವಾರ ಆಯೋಜಿಸಿದ್ದ ಸಿಪಿಐಎಂ ಪಕ್ಷದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.
ಮನುಷ್ಯ ಹುಟ್ಟಿನಿಂದ ಸಾಯುವವರೆಗಿನ ಬವಣೆ, ಸಂಕಟಗಳಿಗೆ ವೈಜ್ಞಾನಿಕ ಕಾರಣಗಳನ್ನು ತಿಳಿಯಬೇಕಿದ್ದು, ಅದಕ್ಕಾಗಿ ಜನರು ವೈಜ್ಞಾನಿಕವಾಗಿ ಯೋಚಿಸಬೇಕು. ದುಡಿಯುವ ವರ್ಗದ ಶ್ರಮಕ್ಕೆ ತಕ್ಕಂತೆ ಕೂಲಿ ನೀಡದೆ ಆಳುವ ವರ್ಗ ಇವರ ಬಡತನಕ್ಕೆ ದೇವರು ಕಾರಣ ಎಂದು ನಂಬಿಸಿದ್ದಾರೆ. ಇಂತಹ ಮೂಢ ನಂಬಿಕೆಗಳ ವಿರುದ್ಧ ಹೋರಾಡಲು ಹೋರಾಟಗಾರ ಶಿಬಿರ ಸಹಾಯಕ ಎಂದರು.
ಸಿಪಿಐಎಂ ಮಾತ್ರವೆ ದುಡಿಯುವ ಹಾಗೂ ತುಳಿತಕ್ಕೊಳಗಾದವರ ಸಮಸ್ಯೆಗಳಿಗೆ ನೈಜ ಕಾರಣವನ್ನು ಹುಡುಕಿ ಅವುಗಳ ಪರಿಹಾರಕ್ಕಾಗಿ ಹೋರಾಟ ರೂಪಿಸುತ್ತದೆ ಎಂದರು. ಶಿಬಿರದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ವೇದಿಕೆಯಲ್ಲಿ ಸಿಪಿಐಎಂ ರಾಜ್ಯ ಮುಖಂಡ ಎನ್.ಕೆ.ವಸಂತರಾಜ್, ವಿಜಯ್ ಕುಮಾರ್, ಎನ್. ಎಲ್.ಭರತ್‌ರಾಜ್, ಸಿ.ಕುಮಾರಿ, ಬಿ.ಹನುಮೇಶ ಮತ್ತು ಎನ್.ಲಿಂಗರಾಜಮೂರ್ತಿ ಇತರರು ಇದ್ದರು.