ತಹಸೀಲ್ದಾರ್‌ಗೆ ಹೋರಾಟಗಾರರ ಮುತ್ತಿಗೆ

ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗುತ್ತಿರುವುದಾಗಿ ಆರೋಪಿಸಿ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಸೋಮವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗುತ್ತಿರುವುದಾಗಿ ಆರೋಪಿಸಿ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಸೋಮವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Published on
ಶ್ರೀರಂಗಪಟ್ಟಣ: ತಾಲೂಕು ವ್ಯಾಪ್ತಿಯಲ್ಲಿನ ಸಾವಿರಾರು ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಭೂಮಿ ಪ್ರಭಾವಿ ಭೂಗಳ್ಳರ ಪಾಲಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ತಾಲೂಕು ಮತ್ತು ಜಿಲ್ಲಾಡಳಿತದ ವಿರುದ್ಧ ಶೀಘ್ರ ಉಗ್ರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿಗೆ ಸೋಮವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಿದ ಅವರು ತಹಸೀಲ್ದಾರ್ ನಾಗೇಶ್ ಅವರನ್ನು ಈ ಬಗ್ಗೆ ಪ್ರಶ್ನಿಸಿ ತರಾಟೆ ತೆಗೆದುಕೊಂಡರು.
2 ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಸಮಿತಿ ಅಕ್ರಮ ಭೂ ಕಬಳಿಕೆ, ಗಣಿಗಾರಿಕೆ, ಭೂ ರಹಿತ ರೈತಾಪಿ ವರ್ಗಕ್ಕೆ ನ್ಯಾಯ ಸೇರಿದಂತೆ ಹಲವು ವಿಚಾರಗಳಲ್ಲಿ ಧನಿ ಎತ್ತಿ ಹೋರಾಟ ಮಾಡಿ ನ್ಯಾಯ ಕೇಳಿದರೂ ಸರ್ಕಾರಿ ಅಧಿಕಾರಿಗಳು ಜಾಣಪೆದ್ದು ಪ್ರದರ್ಶಿಸಿ ಪರೋಕ್ಷವಾಗಿ ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮೈಸೂರು ನಗರಕ್ಕೆ ಸಮೀಪದಲ್ಲಿರುವ ತಾಲೂಕಿನ ಗಡಿ ಗ್ರಾಮಗಳ ಭೂಮಿ ಕೋಟ್ಯಂತರ ಮೌಲ್ಯ ಬೆಲೆ ಬಾಳಲಿದ್ದು, ಬೆಳಗೊಳ ಹೋಬಳಿ ವ್ಯಾಪ್ತಿಯ ಬೀಚನಕುಪ್ಪೆ ಸರ್ವೇನಲ್ಲಿ ಸರ್ಕಾರಿ ಗೋಮಾಳ ಭೂಮಿಯನ್ನು ಪ್ರಭಾವಿ ಉದ್ಯಮಿಯೊಬ್ಬರು ಕಬಳಿಸಿದ್ದಾರೆೆ. ಇನ್ನು ಬೆಳವಾಡಿ ಸರ್ವೇನಂಬರ್‌ನಲ್ಲಿ 25ಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿ ಕಬಳಿಸಿರುವ ಉದ್ಯಮಿಗಳು ಖಾಸಗಿ ಲೇಔಟ್ ನಿರ್ಮಿಸಿದ್ದಾರೆ. ಇಂತಹ ಅಕ್ರಮ ಎಸಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿರುವ ಪ್ರಕರಣವನ್ನು ಪತ್ತೆ ಹಚ್ಚಿ ದಾಖಲೆ, ಸಾಕ್ಷಿ ಸಮೇತ ತಹಸೀಲ್ದಾರ್ ಸಮ್ಮುಖದಲ್ಲೇ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದೇವೆ. ಆದರೂ ಕ್ರಮ ಕೈಗೊಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದರು.
ತಾಲೂಕಿನಲ್ಲಿ ಪ್ರಭಾವಿ ಜನಪ್ರತಿನಿಧಿಯ ಸಹಕಾರದಿಂದಲೇ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ರಾಜಧನ ಪಾವತಿಸದೆ ಸರ್ಕಾರಿ ಗೋಮಾಳ, ಅರಣ್ಯ ಭೂಮಿಯೊಂದಿಗೆ ನೈಸರ್ಗಿಕ ಸಂಪತ್ತು ಲೂಟಿ ಮಾಡಲಾಗುತ್ತಿದೆ. ಆದರೆ ತಾಲೂಕಿನ ಮಹದೇವಪುರ ಗ್ರಾಮ ವ್ಯಾಪ್ತಿಯಲ್ಲಿ ಸಾಕಷ್ಟು ವರ್ಷಗಳಿಂದ ಕೃಷಿ ಮಾಡುತ್ತಿರುವ ಭೂ ರಹಿತ ರೈತಾಪಿ ವರ್ಗಕ್ಕೆ ಅಕ್ರಮ-ಸಕ್ರಮ ಯೋಜನೆಯಡಿ ಖಾತೆ, ಕಂದಾಯ ಮಾಡಿ ದಾಖಲೆಗಳ ಒದಗಿಸಿ ಜೀವನ ಕಲ್ಪಿಸಲು ಈ ಜಿಲ್ಲಾ ಮತ್ತು ತಾಲೂಕು ಆಡಳಿತ ವಿಫಲವಾಗಿದೆ. ಇನ್ನು ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಆಸ್ತಿ ಸಂರಕ್ಷಣೆ ಮತ್ತು ಕೆ.ಆರ್.ಸಾಗರದಲ್ಲಿನ ಟೋಲ್ ಅವಧಿ ಮುಗಿದ್ದಿದ್ದರೂ ಅಕ್ರಮವಾಗಿ ಶುಲ್ಕ ಸಂಗ್ರಹಿಸುತ್ತಿದೆ. ಕೂಡಲೇ ಇದೆಲ್ಲವನ್ನು ತಡೆಯಬೇಕು. ಇಲ್ಲದಿದ್ದರೆ ತಾಲೂಕಿನ ರೈತರು ಜನಾವಾರುಗಳೊಂದಿಗೆ ಉಗ್ರಹೋರಾಟ ಕೈಗೊಳ್ಳಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಭೂಮಿ ತಾಯಿ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಖಜಾಂಚಿ ಮಹದೇವು, ಸದಸ್ಯರಾದ ರವಿಲಕ್ಷ್ಮಣ, ಶಿವಣ್ಣ, ಮಹಾಲಿಂಗು, ಶಿವರಾಜು, ಜಯರಾಮೇಗೌಡ, ಮಂಜುನಾಥ್, ಚಾಮರಾಜು, ಅಚ್ಚಪ್ಪನಕೊಪ್ಪಲು ಕೃಷ್ಣ, ಮೇಳಾಪುರ ದೇವರಾಜು,ದರಸಗುಪ್ಪೆ ಸುರೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net