ಮೇಲುಕೋಟೆಯಲ್ಲಿ ಜಾನಪದ ಕಲಾಮೇಳ

  ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿ ರಥಸಪ್ತಮಿ ಉತ್ಸವ ಅಂಗವಾಗಿ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ 27ನೇ ವರ್ಷದ ಜಾನಪದ ಕಲಾಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಉದ್ಘಾಟಿಸಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಚ್.ವಿ. ರಾಜೀವ್‌ಇತರರು  ಇದ್ದರು.
ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿ ರಥಸಪ್ತಮಿ ಉತ್ಸವ ಅಂಗವಾಗಿ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ 27ನೇ ವರ್ಷದ ಜಾನಪದ ಕಲಾಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಉದ್ಘಾಟಿಸಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಚ್.ವಿ. ರಾಜೀವ್‌ಇತರರು ಇದ್ದರು.
Published on
ಮೇಲುಕೋಟೆ: ಚೆಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ರಥಸಪ್ತಮಿ ಮಹೋತ್ಸವ ವೈವಿಧ್ಯಮಯ ಜಾನಪದ ಕಲಾತಂಡಗಳ ಆರಾಧನೆಯೊಂದಿಗೆ ವೈಭವದಿಂದ ನೆರವೇರಿತು.
ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ 27ನೇವರ್ಷದ ರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ ಪಾಲ್ಗೊಂಡ ನೂರಾರು ಕಲಾತಂಡಗಳು ವೈವಿಧ್ಯಮಯ ಪ್ರದರ್ಶನದ ಮೂಲಕ ಚೆಲುವ ನಾರಾಯಣಸ್ವಾಮಿಗೆ ಭಕ್ತಿಪೂರ್ವಕವಾಗಿ ಕಲಾರಾಧನೆ ಮಾಡುವ ಮೂಲಕ ರಥಸಪ್ತಮಿಗೆ ಮೆರುಗು ನೀಡಿದರು.
*
ಸಚಿವರಿಂದ ಚಾಲನೆ
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಮತ್ತು ಧನಲಕ್ಷ್ಮೀ ದಂಪತಿ ಕಲಾಮೇಳಕ್ಕೆ ಚಾಲನೆ ನೀಡಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ, ತಹಸೀಲ್ದಾರ್ ಬಸವರೆಡ್ಡಪ್ಪ, ಜಾನಪದ ಕಲಾಮೇಳದ ಆಯೋಜಕ,ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್, ಜಾನಪದ ಕಲಾವಿದ ಶಿವಣ್ಣಗೌಡ, ದೇವಾಲಯದ ಇಒ ಶೀಲಾ, ಸೌಮ್ಯಾ ಹಾಜರಿದ್ದರು.
*
ಸೂರ್ಯಮಂಡಲ ವಾಹನೋತ್ಸವ
ಬೆಳಗ್ಗೆ 7. 30ಕ್ಕೆ ಚೆಲುವನಾರಾಯಣಸ್ವಾಮಿಯ ಸೂರ್ಯಮಂಡಲ ವಾಹನೋತ್ಸವದ ತೇರು ಎಳೆಯುವ ಮೂಲಕ ರಥಸಪ್ತಮಿಗೆ ಚಾಲನೆ ನೀಡಲಾಯಿತು. ನಂತರ ಮೇಲುಕೋಟೆಯ ಉತ್ಸವಬೀದಿಗಳೇ ಕಲಾರಾಧನೆಯ ವೇದಿಕೆಯಾಗಿ ಜಾನಪದ ಲೋಕ ಅನಾವರಣಗೊಂಡಿತು. ಮೇಳದಲ್ಲಿ ಪಾಲ್ಗೊಂಡಿದ್ದ 600ಕ್ಕೂ ಹೆಚ್ಚು ಕಲಾವಿದರು ಕಲಾವಂತಿಕೆ ಮೆರೆದರು. ಬಿಸಿಲು ಮಾರಮ್ಮನ ಸನ್ನಿಧಿಯ ಬಳಿ ಚೆಲುವನಾರಾಯಣಸ್ವಾಮಿಗೆ ಸೂರ್ಯನ ರಶ್ಮಿ ಬಿದ್ದನಂತರ ಮಹೋತ್ಸವ ಮುಂದುವರಿಯಿತು.
* ವಿವಿಧ ತಂಡಗಳು
ಜಾನಪದ ಜಾತ್ರೆಯಲ್ಲಿ ತಮಟೆ, ನಗಾರಿ,ಚಂಡೆಗಳ ನೀನಾದ ಮೈನವಿರೇಳಿಸಿತು. ಗಾರುಡಿ ಗೊಂಬೆಗಳ ನರ್ತನ ನೋಡುಗರನ್ನು ಕಲಾ ಲೋಕಕ್ಕೆ ಕೊಂಡೊಯ್ಯುವಲ್ಲಿ ಸಫಲವಾಯಿತು.
ಕೇರಳದ ಚೆಂಡೆಮೇಳ, ಚಿಲಿಪಿಲಿ ಗೊಂಬೆ, ಕೊತ್ತತ್ತಿಯ ಮರಗಾಲು ಕುಣಿತ, ಚಾಮರಾಜ ನಗರದ ಹುಲಿವೇಷ, ಕರಗದ ನೃತ್ಯ, ಮೈಸೂರು ನಗಾರಿ, ನಾಸಿಕ್ ಢೋಲ್, ಕರಡಿಮಜಲು, ಪಟ ಕುಣಿತ,
ಗಾರುಡಿಗೊಂಬೆ, ಕೋಲಾಟ, ಡೊಳ್ಳುಕುಣಿತ, ಜಾಂಜ್‌ಮೇಳ, ಸೋಮನ ಕುಣಿತ. ಚಕ್ರಾದಿ ಬಳೆ, ಖಡ್ಗ ಪವಾಡ, ವೀರಭದ್ರನ ಕುಣಿತ ರಂಜಿಸಿದವು. ರಥಸಪ್ತಮಿ ಮಹೋತ್ಸವದ ಅಂಗವಾಗಿ ಚೆಲುವನಾರಾಯಣಸ್ವಾಮಿ ದೇವಾಲಯದ ರಾಜಗೋಪುರ ಮತ್ತು ರಾಜಬೀದಿಗಳಿಗೆ ದೀಪಾಲಂಕಾರ ಮಾಡಿ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು .
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net