ಮಂಡ್ಯ:ಪ್ರಸಕ್ತ ಸಾಲಿನ ತಾಲೂಕು ಪಂಚಾಯಿತಿ ಲಿಂಕ್ ಡಾಕ್ಯುಮೆಂಟ್ ಅನುದಾನದಡಿ ಬಿಡುಗಡೆಯಾಗುವ ಅನುದಾನಕ್ಕೆ ಕ್ರಿಯಾ ಯೋಜನೆ ಸಿದ್ದಪಡಿಸುವಾಗ ಅವಶ್ಯಕತೆ ಇರುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಅಂತೆಯೇ ಆ ಕಾಮಗಾರಿಗೆ ಅವಶ್ಯಕತೆ ಇರುವಷ್ಟು ಅನುದಾನವನ್ನು ಮಾತ್ರ ನಿಗದಿಗೊಳಿಸುವಂತೆ ತಾಪಂ ಇಒಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕ್ರಿಯಾಯೋಜನೆಗೆ ಸೇರ್ಪಡೆ ಮಾಡುವ ಕಾಮಗಾರಿಗಳು ಯಾವ ಇಲಾಖೆಗೆ ಸೇರಿದೆಯೋ, ಆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಬೇಕು. ಮಾತ್ರವಲ್ಲದೆ ಯಾವ ಘಟಕಾಂಶಕ್ಕೆ ಅನುದಾನದ ಅವಶ್ಯಕತೆ ಇದೆ. ಪ್ರಸ್ತುತ ಸ್ಥಿತಿ ಕುರಿತು ಜಿ.ಪಿ.ಎಸ್ ಆಧಾರಿತ ಛಾಯಾಚಿತ್ರ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
15ನೇ ಹಣಕಾಸು ಯೋಜನೆಯಡಿ ಈವರೆಗೆ ಬಿಡುಗಡೆಯಾಗಿರುವ ಅನುದಾನದ ಪೈಕಿ ವೆಚ್ಚವಾಗದೇ ಉಳಿದಿರುವ ಅನುದಾನ ಮತ್ತು ಸದರಿ ಅನುದಾನಕ್ಕೆ ಸ್ವೀಕೃತವಾಗಿರುವ ಬಡ್ಡಿ ಮೊತ್ತವನ್ನು ಯೋಜನೆಯ ನಿಯಮಗಳನ್ವಯ ವೆಚ್ಚ ಭರಿಸಲು ಅಗತ್ಯ ಕ್ರಮ ವಹಿಸಬೇಕು. ಕಾಮಗಾರಿಯನ್ನು ಅನುಷ್ಟಾನಗೊಳಿಸುವಾಗ ನಿಯಮಗಳನ್ನು ಪಾಲಿಸದಿದ್ದಲ್ಲಿ ಅಥವಾ ಕಾಮಗಾರಿಯಲ್ಲಿ ಲೋಪದೋಷ ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನರೇಗಾ ಯೋಜನೆಯ ಸಾಮಗ್ರಿ ಪಾವತಿ: ಹಿಂದಿನ ಆರ್ಥಿಕ ವರ್ಷಗಳಲ್ಲಿ ಬಾಕಿ ಉಳಿಸಿಕೊಂಡಿರುವ ನರೇಗಾ ಯೋಜನೆಯ ಕಾಮಗಾರಿಗಳ ಸಾಮಗ್ರಿ ಮೊತ್ತ ಪಾವತಿಗೆ ಅನುದಾನ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಆ ಅನುದಾನವನ್ನು ಜೇಷ್ಠತೆಯ ಆಧಾರದ ಮೇಲೆ ತೀರುವಳಿಗೊಳಿಸಲು ತಿಳಿಸಲಾಗಿದೆ. ಅದರಂತೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳು ಮೂರು ದಿನಗಳ ಒಳಗಾಗಿ ಬಿಡುಗಡೆಯಾಗಿರುವ ಅನುದಾನದ ಲಭ್ಯತೆಗೆ ಅನುಗುಣವಾಗಿ ಬಿಲ್‌ಗಳನ್ನು ಸಿದ್ದಪಡಿಸಿ ಖಜಾನೆಗೆ ಸಲ್ಲಿಸಲು ಸೂಚಿಸಲಾಗಿದೆ ಎಂದರು.
ಇನ್ನು ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳ ಪೈಕಿ ಇನ್ನೂ ಪ್ರಾರಂಭವಾಗದಿರುವ ಮನೆಗಳನ್ನು ಸರ್ಕಾರದ ನಿರ್ದೇಶನಗಳನ್ವಯ ರದ್ದುಪಡಿಸಲು ಅಗತ್ಯ ಕ್ರಮ ವಹಿಸಬೇಕು. ಅದೇ ರೀತಿ ಪ್ರಗತಿಯಲ್ಲಿರುವ ಮನೆಗಳನ್ನು ಜೂನ್ ಮಾಹೆಯ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ ಜಿಪಂ ಸಿಇಒ ಕೆ.ಆರ್.ನಂದಿನಿ, ನಿವೇಶನ ರಹಿತರಿಗೆ ನಿವೇಶನ ರಚಿಸಲು ಅಗತ್ಯವಿರುವ ಭೂಮಿಯನ್ನು ಮಂಜೂರು ಮಾಡುವಂತೆ ಕಂದಾಯ ಇಲಾಖೆಗೆ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಬೇಕು. ಹಾಗೂ ಈಗಾಗಲೇ ಲಭ್ಯವಿರುವ ಜಮೀನನ್ನು ನಿವೇಶನ ಹಂಚಲು ಯೋಗ್ಯವಲ್ಲದಿದ್ದಲ್ಲಿ ವಿವರವಾದ ವರದಿ ಸಿದ್ದಪಡಿಸಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
2026-27ನೇ ಸಾಲಿನ ಬೇಡಿಕೆಗೆ ಅನುಗುಣವಾಗಿ ತೆರಿಗೆ ವಸೂಲಾತಿಯನ್ನು ತ್ವರಿತಗೊಳಿಸುವಂತೆ ತಾಪಂ ಇಒಗಳಿಗೆ ಸೂಚನೆ ನೀಡಿದ ಸಿಇಒ, ಪ್ರಸಕ್ತ ಸಾಲಿನ ಬೇಡಿಕೆಯ ಶೇ.10ರಷ್ಟು ಮೊತ್ತವನ್ನು ಪ್ರತೀ ಮಾಹೆ ವಸೂಲಿ ಮಾಡಲು ಗುರಿ ನಿಗದಿಗೊಳಿಸಬೇಕು. ಅದರಂತೆ ಪ್ರಗತಿ ಸಾಧಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಡಾ.ಶಿವಲಿಂಗಯ್ಯ, ಉಪ ಕಾರ್ಯದರ್ಶಿ(ಅಭಿವೃದ್ದಿ) ಲಕ್ಷ್ಮೀ, ಮುಖ್ಯ ಯೋಜನಾಧಿಕಾರಿ ಧನುಷ್, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ್ ನಾಯಕ್, ಸಹಾಯಕ ಯೋಜನಾಧಿಕಾರಿ ಶ್ರೀ ಹರ್ಷ, ಸಹಾಯಕ ಕಾರ್ಯದರ್ಶಿ ಬೋರೇಗೌಡ ಇತರರಿದ್ದರು.