ಜಂಟಿ ಸರ್ವೇ ತ್ವರಿತವಾಗಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಂಟಿ ಸರ್ವೇಯನ್ನು ತ್ವರಿತವಾಗಿ ಪೂರ್ಣಗೊಳಿಸಿ
  • ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಚರ್ಚೆ
ಮಂಡ್ಯ: ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ಆದೇಶದಲ್ಲಿ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಜಮೀನನ್ನು ಮರು ಅಳತೆ ಮಾಡಲು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದಲ್ಲಿ ಅರಣ್ಯ ಮತ್ತು ಸರ್ವೇ ಇಲಾಖೆ ಜತೆಗೂಡಿ ಜಂಟಿ ಸರ್ವೇಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 33 ಸಾವಿರ ಹೆಕ್ಟೇರ್ ಭೂಮಿ ಈ ಹಿಂದೆ ಡೀಮ್ಡ್ ಅರಣ್ಯ ಪ್ರದೇಶವೆಂದು ಅಧಿಸೂಚಿತಗೊಂಡಿದೆ. ವಾಸ್ತವವಾಗಿ ಅರಣ್ಯದ ಗುಣ ಲಕ್ಷಣಗಳಿರುವ ಜಾಗವನ್ನು ಅರಣ್ಯ ಇಲಾಖೆಗೆ ವಹಿಸಲು ಮತ್ತು ಅರಣ್ಯ ಗುಣಲಕ್ಷಣ ಇಲ್ಲದಿದ್ದರೂ ಅಂತಹ ಜಮೀನುಗಳನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ಹೊರತುಪಡಿಸುವ ಉದ್ದೇಶದಿಂದ ಜಂಟಿ ಸರ್ವೇ ನಡೆಸಲಾಗುತ್ತಿದೆ ಎಂದರು.
ಅಲ್ಲದೆ, ಪರಿಭಾವಿತ ಅರಣ್ಯ ಪಟ್ಟಿಯಿಂದ ಹೊರಗಿಡಲಾಗುವ ಜಮೀನುಗಳನ್ನು ವಸತಿ ಯೋಜನೆ, ಕುಡಿಯುವ ನೀರಿನ ಯೋಜನೆ ಹಾಗೂ ಇತರೆ ಸಾರ್ವಜನಿಕ ಉದ್ದೇಶಗಳಿಗೆ ಕಾಯ್ದಿರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ವಿಶ್ವನಾಥ್ ಇತರರಿದ್ದರು.

ವಸತಿ ಉದ್ದೇಶಕ್ಕಾಗಿ ನಿವೇಶನ ಗುರುತಿಸಿ
ನಿವೇಶನ ರಹಿತರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ತಹಸೀಲ್ದಾರ್‌ಗಳು ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಸ್ತಾವನೆಗಳನ್ನು ಪಡೆದು ನಿವೇಶನಕ್ಕಾಗಿ ಸೂಕ್ತ ಸರ್ಕಾರಿ ಜಾಗಗಳನ್ನು ಗುರುತಿಸುವ ಕಾರ್ಯವನ್ನು ಅಭಿಯಾನ ರೂಪದಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಟ 5 ಎಕರೆ ಹಾಗೂ ಗರಿಷ್ಟ 20 ಎಕರೆ ಸರ್ಕಾರಿ ಜಾಗವನ್ನು ನಿವೇಶನ ಉದ್ದೇಶಕ್ಕಾಗಿ ಗುರುತಿಸಿ, ಅಗತ್ಯ ಪ್ರಸ್ತಾವನೆಗಳನ್ನು ತಯಾರಿಸಿ ಸಲ್ಲಿಸಬೇಕು. ಅಲ್ಲದೆ, ಈಗಾಗಲೇ ಪರಿಭಾವಿತ(ಡೀಮ್ಡ್) ಅರಣ್ಯ ಪಟ್ಟಿಯಿಂದ ಕೈಬಿಡಲಾಗುತ್ತಿರುವ ಸೂಕ್ತ ಜಾಗಗಳನ್ನು ನಿವೇಶನ ಉದ್ದೇಶಕ್ಕಾಗಿ ಕಾಯ್ದಿರಿಸುವ ಕುರಿತು ಅಗತ್ಯ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸೂಚಿಸಿದ ಡಿಸಿ, ನಿವೇಶನ ರಹಿತ ಅರ್ಹ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯತೆಯ ಕಾರ್ಯಕ್ರಮ. ಈ ಸಂಬಂಧ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಶೀಘ್ರವಾಗಿ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net