ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಕೆ.ಎಂ. ಉದಯ್ ಭೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಮಾತನಾಡಿದರು. ಸುನಂದಾ ಜಯರಾಮು, ವೀರಪ್ಪ, ಗುರುಮೂರ್ತಿ, ಡಾ. ಹೊನ್ನಯ್ಯ ಇದ್ದರು.
ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಯಿಂದ ಕೈಬಿಡುವಂತೆ ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅಧಿಕಾರಿಗಳ ಬಳಿ ಚರ್ಚಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ನಗರಸಭೆಗೆ ಸೇರ್ಪಡೆಗೊಂಡಿರುವುದನ್ನು ಖಂಡಿಸಿ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ 251 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಕೆ.ಎಂ.ಉದಯ್ ಎರಡನೇ ಬಾರಿಗೆ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ಮಾತನಾಡಿದರು. ಇನ್ನೊಂದು ವಾರದೊಳಗೆ ವಿಧಾನಸೌಧದಲ್ಲಿ ಅಧಿಕಾರಿಗಳು ಮತ್ತು ಗ್ರಾಮದ ಕೆಲವು ಪ್ರಮುಖ ಹೋರಾಟಗಾರರ ಜತೆಗೆ ಸಭೆ ನಡೆಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯಾದರೂ, ನಗರಸಭೆಯಾದರೂ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದಿಲ್ಲ. ಎರಡು ವರ್ಷಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ರೈತ ನಾಯಕಿ ಸುನಂದಾ ಜಯರಾಮು ಮಾತನಾಡಿ, ಗೆಜ್ಜಲಗೆರೆ ಗ್ರಾಪಂ ಅನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಸುಮಾರು 251 ದಿನಗಳಿಂದ ನಿರಂತರವಾಗಿ ಶಾಂತಿಯುತ ಹೋರಾಟ ಮಾಡುತ್ತಿದ್ದು, ಶಾಸಕ ಕೆ.ಎಂ.ಉದಯ್ ಅವರು ಗೆಜ್ಜಲಗೆರೆಯನ್ನು ಮದ್ದೂರು ನಗರಸಭೆಯಿಂದ ಕೈ ಬಿಟ್ಟು ಗ್ರಾಮ ಪಂಚಾಯಿತಿಯಾಗೆ ಉಳಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಶೀಘ್ರ ನಮ್ಮ ಬೇಡಿಕೆ ಈಡೇರಿಸಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು.
ಗ್ರಾಮದ ಮುಖಂಡರಾದ ಜಿ.ಎಚ್.ವೀರಪ್ಪ, ಗುರುಮೂರ್ತಿ, ಜಿ.ಟಿ.ಚಂದ್ರಶೇಖರ್, ಡಾ.ಹೊನ್ನಯ್ಯ, ತಾಪಂ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಶಾಂತಮ್ಮ, ಗೌರಮ್ಮ, ಜಯಮ್ಮ ಇತರರು ಹಾಜರಿದ್ದರು.