ಗಿಲ್ಲಿ ನಟನಿಗೆ ಅದ್ದೂರಿ ಸ್ವಾಗತ

  ಮಳವಳ್ಳಿ ತಾಲೂಕಿಗೆ ಆಗಮಿಸಿದ ಬಿಗ್‌ಬಾಸ್ ಶ್ೋ ವಿಜೇತ ಗಿಲ್ಲಿನಟನನ್ನು ಮೆರವಣಿಗೆ ನಡೆಸಲಾಯಿತು
ಮಳವಳ್ಳಿ ತಾಲೂಕಿಗೆ ಆಗಮಿಸಿದ ಬಿಗ್‌ಬಾಸ್ ಶ್ೋ ವಿಜೇತ ಗಿಲ್ಲಿನಟನನ್ನು ಮೆರವಣಿಗೆ ನಡೆಸಲಾಯಿತು
Published on
ಮಳವಳ್ಳಿ: ಬಿಗ್ ಬಾಸ್-12ನೇ ಆವೃತ್ತಿಯ ವಿಜೇತ ಗಿಲ್ಲಿ ನಟ(ನಟರಾಜ್) ಸೋಮವಾರ ಟ್ರೋಫಿಯೊಂದಿಗೆ ಮಳವಳ್ಳಿಗೆ ಆಗಮಿಸಿದ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ತಾಲೂಕಿನ ಗಡಿಭಾಗದಿಂದ ನೆಲಮಾಕನಹಳ್ಳಿ ಗೇಟ್, ಟಿ.ಕಾಗೇಪುರ ಗೇಟ್ ಬಳಿಯೇ ಜನರು ಜಯ ಘೋಷಣೆಯೊಂದಿಗೆ ಸ್ವಾಗತಿಸಿದರು. ನಂತರ ಪಟ್ಟಣದ ಹೊರವಲಯದ ಆರ್.ಆರ್.ಫ್ಯಾಮಿಲಿ ಡಾಬಾ ಬಳಿ ಆಗಮಿಸುತ್ತಿದ್ದಂತೆಯೇ ಮಾಲೀಕ ರಾಜು ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ ಬರಮಾಡಿಕೊಳ್ಳಲಾಯಿತು. ಪಟ್ಟಣದ ಹೊರ ಭಾಗದಲ್ಲಿರುವ ಶಕ್ತಿ ದೇವತೆ ದಂಡಿನಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಗ್ ಬಾಸ್ ಟ್ರೋಫಿಯೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಟ್ಟಣಕ್ಕೆ ಆಗಮಿಸಿದ ಗಿಲ್ಲಿಗೆ ಅನಂತ ವೃತ್ತದ ಬಳಿ ಬೃಹತ್ ಹೂವಿನ ಹಾರ ಹಾಕಿ ಹೂವಿನ ಸುರಿಮಳೆ ಸುರಿಸಿದ ಸಹಸ್ರರು ಸಂಖ್ಯೆಯಲ್ಲಿ ಆಗಮಿಸಿದ ಯುವಕರ ದಂಡು ಜಯ ಘೋಷದೊಂದಿಗೆ ಪಟಾಕಿ ಸಿಡಿಸಿ ಜಯವನ್ನು ಸಂಭ್ರಮಿಸಿದರು.
ದಂಡಿನ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತೆರದ ವಾಹನದಲ್ಲಿ ಮದ್ದೂರು-ಮಳವಳ್ಳಿಯಲ್ಲಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಸಾವಿರಾರು ಬೈಕ್ ರ್ಯಾಲಿಯನ್ನು ದಂಡಿನಮಾರಮ್ಮ ದೇವಸ್ಥಾನದಿಂದ ತಾಲ್ಲೂಕಿನ ದಡದಪುರದವರೆವಿಗೂ ಹಮ್ಮಿಕೊಳ್ಳಲಾಗಿತ್ತು.
ಗಿಲ್ಲಿ ನಟನೊಂದಿಗೆ ಪೊಟೊ ತೆಗೆದುಕೊಳ್ಳಲು ಯುವಕ ಯುವತಿಯರು ಮುಗಿಬಿದ್ದರು. ಪೊಟೋ ತೆಗದುಕೊಳ್ಳುವ ಸಂದರ್ಭದಲ್ಲಿ ಎಳೆದಾಡಿದರು. ಪೊಲೀಸರು ಯುವಕರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು.
ಗಿಲ್ಲಿನಟನನ್ನು ನೋಡಲು ಮೈಸೂರು, ಚಾಮರಾಜನಗರ, ಹನೂರು, ಕೊಳ್ಳೇಗಾಲ ಬನ್ನೂರು ಸೇರಿದಂತೆ ವಿವಿಧೆಡೆಯಿಂದ ಯುವಕ ಯುವತಿಯರ ದಂಡೆ ಜಮಾಯಿತು. ಪಟ್ಟಣದಲ್ಲಿ ಗಿಲ್ಲಿ ಅಭಿಮಾನಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಗಿಲ್ಲಿ ಗಿಲ್ಲಿ ಎಂಬ ಘೋಷಣೆಗಳನ್ನು ಕೂಗಿ ಅಭಿಮಾನವನ್ನು ಮೆರೆದರು.
ಮಳವಳ್ಳಿ ಪಟ್ಟಣದಿಂದ ಸುಲ್ತಾನ್ ರಸ್ತೆಯ ಮೂಲಕ ಹುಟ್ಟೂರು ದಡದಪುರಕ್ಕೆ ಆಗಮಿಸುವ ಸಂದರ್ಭದಲ್ಲಿ ಪ್ರತಿ ಗ್ರಾಮದ ಗೇಟ್ ನಲ್ಲಿ ಗಿಲ್ಲಿಗೆ ಮಂಗಳಾರತಿ ಎತ್ತಿ ತಮಟೆ ವಾದ್ಯಗಳೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು. ಜೊತೆಗೆ ಈಡಗಾಯಿ ಹೊಡೆದಿದ್ದು ವಿಶೇಷವಾಗಿತ್ತು.
ರಿಯಾಲಿಟಿ ಶೋನಲ್ಲಿ ಗೆಲುವು ಸಾಧಿಸಿ ತಮ್ಮ ಊರಿಗೆ ಆಗಮಿಸುವ ಗಿಲ್ಲಿನಟನನ್ನು ನೋಡಲು ಯುವಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಹಾಗೂ ಡಿವೈಎಸ್ಪಿ ಯಶ್ವಂತಕುಮಾರ್ ಅವರ ನೇತೃತ್ವದಲ್ಲಿ ಪಟ್ಟಣ ಹಾಗೂ ದಡದಪುರ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಜನದಟ್ಟನೆ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಹಾಸ ಪಡುವಂತಾಯಿತು.
*
ಇಷ್ಟೊಂದು ಅಭಿಮಾನದಿಂದ ಸ್ವಾಗತಿಸಿ ಬರಮಾಡಿಕೊಂಡಿದ್ದನ್ನು ಎಂದಿಗೂ ಮರೆಯುವುದಿಲ್ಲ. ನಿಮ್ಮೆಲ್ಲರ ಅಭಿಮಾನಕ್ಕೆ ಎಂದೆಂದಿಗೂ ಚಿರಋಣಿಯಾಗಿರುತ್ತೇನೆ.
> ಗಿಲ್ಲಿ ನಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net