ಕಿಕ್ಕೇರಿಯಲ್ಲಿ ಸಾಮೂಹಿಕ ಪ್ರಾರ್ಥನೆ

ಕಿಕ್ಕೇರಿಯಲ್ಲಿ ಮುಸ್ಲಿಂ ಬಾಂಧವರು ಈದ್-ಉಲ್-ಫಿತ್ರ್ ಹಬ್ಬದ ಪ್ರಯುಕ್ತ ಶನಿವಾರ ಸಾಮೂಹಿಕವಾಗಿ ಪ್ರಾರ್ಥನೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಕಿಕ್ಕೇರಿಯಲ್ಲಿ ಮುಸ್ಲಿಂ ಬಾಂಧವರು ಈದ್-ಉಲ್-ಫಿತ್ರ್ ಹಬ್ಬದ ಪ್ರಯುಕ್ತ ಶನಿವಾರ ಸಾಮೂಹಿಕವಾಗಿ ಪ್ರಾರ್ಥನೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು.
Published on
ಕಿಕ್ಕೇರಿ: ಇಲ್ಲಿನ ಜಾಮಿಯಾ ಮಸೀದಿ ಬಳಿ ಮುಸ್ಲಿಮರು ಈದ್-ಉಲ್-ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಶನಿವಾರ ಆಚರಣೆ ಮಾಡಿದರು.
ಒಂದು ತಿಂಗಳ ಕಾಲ ನಿತ್ಯ ಸೂರ್ಯೋದಯದಿಂದ ಸೂರ್ಯಾಸ್ತ ಆಗುವವರಿಗೆ ಒಂದು ಹನಿ ನೀರು ಸೇವಿಸದೆ ಕಠಿಣ ಉಪವಾಸವಿದ್ದರು. ಮುಂಜಾನೆ ಹಾಗೂ ಸೂರ್ಯಾಸ್ತದ ಮುಸ್ಸಂಜೆ ವೇಳೆ ಮಾತ್ರ ಉಪಾಹಾರ, ತಿಂಡಿ ಸೇವನೆ ಮಾಡುವ ಮೂಲಕ ಹಬ್ಬದ ಮಹತ್ವವನ್ನು ಸಾರಿದರು.
ಜಾಮಿಯಾ ಮಸೀದಿ ಬಳಿ ಶನಿವಾರ ಬೆಳಗ್ಗೆ ಮೊದಲ ಪ್ರಾರ್ಥನೆ ಮಾಡಿದರು. ನಂತರ ಕೋಟೆ ಗಣಪತಿ, ಆಂಜನೇಯ ಬೀದಿಯ ಮೂಲಕ ಮೆರವಣಿಗೆ ಮೂಲಕ ಸಾಗಿ ದೇವರ ಪ್ರಾರ್ಥನೆ ಮಾಡುತ್ತಾ ರಥಬೀದಿ, ಮಂದಗೆರೆ ರಸ್ತೆಯಲ್ಲಿ ಸಾಗಿದರು. ಅಂತಿಮವಾಗಿ ಗ್ರಾಮದ ಹೊರವಲಯದ ಈದ್ಗಾ ಮೈದಾನದಲ್ಲಿ ಜಮಾಯಿಸಿದರು.
ಧರ್ಮಗುರು ಫಕ್ರಿಯ ಆಲಂ ಅವರು ಕುರಾನ್ ಪಠಣೆ ಮಾಡಿದರು. ದೇವರ ಅಣತಿಯಂತೆ ಸೌಹಾರ್ದ ಜೀವನ ನಡೆಸಬೇಕು. ಸಮಾನತೆ, ಸಹೋದರ ಭ್ರಾತೃತ್ವ, ಪರೋಪಕಾರ, ದಾನ ಧರ್ಮ ಮಾಡಬೇಕು. ಉಪವಾಸದ ಮೂಲಕ ಮನಸ್ಸಿನ ಕಲ್ಮಶ ತೊಡೆದು ಹಾಕಿ ಭಾವೈಕ್ಯದಿಂದ ಬದುಕಬೇಕು ಎಂಬ ಸಂದೇಶ ಸಾರಿದರು.
ಪರಸ್ಪರ ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು. ನಂತರ ಅಮಾನಿಕೆರೆ ಬಳಿ ಇರುವ ಖಬರ್‌ಸ್ಥಾನಕ್ಕೆ ತೆರಳಿ ಅಗಲಿದ ಕುಟುಂಬದ ಪಿತೃಗಳಿಗೆ ನಮಸ್ಕರಿಸಿದರು. ಪುಟಾಣಿ ಮಕ್ಕಳು, ಹಿರಿಯರು, ಯುವಕರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಬಂದ ಅತಿಥಿಗಳಿಗೆ ಮಾಂಸದೂಟದ ಭೂರಿ ಭೋಜನದ ಆತಿಥ್ಯ ನೀಡಿದರು.
ಆನೆಗೊಳ ಹಾಗೂ ಮಂದಗೆರೆಯಲ್ಲಿಯೂ ಹಬ್ಬದ ಪ್ರಯುಕ್ತ ಜಮೀಯ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಬಡವ ಬಲ್ಲಿದವರಿಗೆ ದಾನ ಧರ್ಮ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net