ಮದ್ದೂರು: ತಾಲೂಕಿನ ನಗರಕೆರೆ ಗ್ರಾಮದ ಶ್ರೀ ಪಟ್ಟಲದಮ್ಮ ದೇಗುಲದಲ್ಲಿ ನಾಲ್ಕನೇ ಅಷಾಢ ಶುಕ್ರವಾರದ ಅಂಗವಾಗಿ ವಿಶೇಷ ಪೂಜೆ ಹಾಗೂ ಸಹಸ್ರಾರು ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆಯಿಂದಲ್ಲೇ ದೇಗುದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನೆರವೇರಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಗ್ರಾಮೀಣ ಸೊಗಡಸಿನ ಅವರೇಕಾಳು ಗೊಜ್ಜು, ರಾಗಿ ಮುದ್ದೆ, ಅನ್ನ ಸಾಂಬಾರ್, ಪಾಯಸ ಹಾಗೂ ಮಜ್ಜಿಗೆಯನ್ನು ಉಣ ಬಡಿಸಲಾಯಿತು. ಭಕ್ತಾಧಿಗಳು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕಾರ ಮಾಡಿದರು.
ಆಷಾಢ ಶುಕ್ರವಾರದ ಅಂಗವಾಗಿ ದೇಗುಲಕ್ಕೆ ಸಣ್ಣಕ್ಕರಾಯಸ್ವಾಮಿ ಬಸವಣ್ಣ, ಸೂನಗನಹಳ್ಳಿ ವರದರಾಜಸ್ವಾಮಿ ಬಸವಣ್ಣ, ಚಿಕ್ಕರಸಿನಕೆರೆ ಕಾಲಭೈರವೇಶ್ವರ ಬಸವಣ್ಣವನರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ತಂಬಿಟ್ಟಿನಾರತಿಯೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಿ ದೇಗುಲಕ್ಕೆ ಕರೆತರಲಾಯಿತು.