ರೈತರ ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಸಹಕಾರಿ

ನಾಗಮಂಗಲ ತಾಲೂಕಿನ ವಡೇರಪುರ ಗ್ರಾಮದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಎನ್.ಅಪ್ಪಾಜಿಗೌಡ, ವಿ.ಬಿ.ಸಾನಂದ,  ಡಾ.ಪಿ.ಆರ್.ಮಂಜೇಶ್, ಜಿ.ಕೆ.ಶಿವಕುಮಾರ್ ಇತರರು ಇದ್ದರು.
ನಾಗಮಂಗಲ ತಾಲೂಕಿನ ವಡೇರಪುರ ಗ್ರಾಮದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಎನ್.ಅಪ್ಪಾಜಿಗೌಡ, ವಿ.ಬಿ.ಸಾನಂದ, ಡಾ.ಪಿ.ಆರ್.ಮಂಜೇಶ್, ಜಿ.ಕೆ.ಶಿವಕುಮಾರ್ ಇತರರು ಇದ್ದರು.
Published on
ನಾಗಮಂಗಲ: ಕೃಷಿ ಚಟುವಟಿಕೆ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ರೈತರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
ತಾಲೂಕಿನ ವಡೇರಪುರ ಗ್ರಾಮದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರಿಗೆ ಹೈನುಗಾರಿಕೆ ಆರ್ಥಿಕವಾಗಿ ಶಕ್ತಿ ಕೊಡುತ್ತದೆ ಎಂದರು.
ರೈತರು ಕೃಷಿ ಜತೆಗೆ ಒಂದೆರಡು ಜಾನುವಾರುಗಳನ್ನು ಸಾಕುವುದರಿಂದ ಆತನ ಕುಟುಂಬ ನಿರ್ವಹಣೆಗೆ ಹಣಕಾಸಿನ ನೆರವು ಲಭಿಸುತ್ತದೆ. ಸರ್ಕಾರ ಕೂಡ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿರುವುದು ರೈತರಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಸಹಕಾರ ಸಂಘಗಳು ಸಹಕಾರ ತತ್ವದಡಿ ನಡೆಯುತ್ತಿರುವುದರಿಂದ ಇಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಹಾಲು ಉತ್ಪಾದಕರ ಸಂಘಗಳು ಸದೃಢವಾಗಿ ಉಳಿಯಲು ಗುಣಮಟ್ಟದ ಹಾಲು ಪೂರೈಸುವುದು ಎಲ್ಲ ಉತ್ಪಾದಕರ ಕರ್ತವ್ಯ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ರೈತರು ಉತ್ಪಾದಿಸುವ ಹಾಲನ್ನು ಸ್ಥಳೀಯವಾಗಿಯೇ ಶಿಥಿಲೀಕರಿಸಿ ಹಾಲಿನ ಗುಣಮಟ್ಟ ಕಾಪಾಡಲು ತಾಲೂಕಿನಲ್ಲಿ 50ಕ್ಕೂ ಹೆಚ್ಚು ಬಿಎಂಸಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರ ಮತ್ತು ಜಿಲ್ಲಾ ಹಾಲು ಒಕ್ಕೂಟ ರೈತಪರವಾಗಿದ್ದು, ಹೈನುಗಾರಿಕೆಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಸಿದ್ಧವಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಹಳ್ಳಿಗಾಡಿನ ಪ್ರತಿ ಕುಟುಂಬವೂ ಸಹ ಆರ್ಥಿಕ ಭದ್ರತೆಗಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ನಂತರ ತಾಲೂಕಿನ ಹೊಸಮನೆ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವರು, ಭಕ್ತನಾಥಪುರ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ವಡೇರಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ವಡೇರಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ಬಿ.ಸಾನಂದ, ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಕೆ.ಶಿವಕುಮಾರ್, ತಾಲೂಕು ಘಟಕದ ಅಧ್ಯಕ್ಷ ಕಲ್ಲುಕೊಂಬರಿ ಗೋವಿಂದ, ಮನ್‌ಮುಲ್ ನಾಗಮಂಗಲ ಉಪ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರಫುಲ್‌ಗೌಡ, ನೆಲ್ಲಿಗೆರೆ ಗ್ರಾಪಂ ಮಾಜಿ ಅಧ್ಯಕ್ಷೆ ನಗೀನಾಬಾನು, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಎನ್.ಮುರಳೀಧರ್, ಸಂಘದ ಕಾರ್ಯದರ್ಶಿ ಮಹದೇವಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net