ಪಾಂಡವಪುರ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದ ಪುಸ್ತಕ ಪ್ರೇಮಿ ಅಂಕೇಗೌಡ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಶ್ರೀ ಸಿದ್ಧಿ ಮಂಟಪ ಟ್ರಸ್ಟ್ ಹಾಗೂ ಜ್ಯೋತಿಪಣ ಹತ್ತು ಜನಗಳ ಗಾಣಿಗರ ಟ್ರಸ್ಟ್‌ನಿಂದ ಸನ್ಮಾನಿಸಲಾಯಿತು.
ಗಾಣಿಗ ಜನಾಂಗದ ರಾಮಸ್ವಾಮಿ ಗುರೂಜಿ ನೇತೃತ್ವದಲ್ಲಿ ಅಂಕೇಗೌಡ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಪೇಟ ತೊಡಿಸಿ, ಹಣ್ಣು, ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬಳಿಕ ರಾಮಸ್ವಾಮಿ ಗುರೂಜಿ ಮಾತನಾಡಿ, ಈ ಹಿಂದೆ ಪುಸ್ತಕಗಳು ಸಿಗುತ್ತಿರಲಿಲ್ಲ, ಪುಸ್ತಕ ಓದುವವರಿದ್ದರು. ಆದರೆ ಈಗ ಸಾಕಷ್ಟು ಪುಸ್ತಕಗಳು ಸಿಗುತ್ತಿವೆ. ಪುಸ್ತಕ ಓದುವವರೇ ಇಲ್ಲದಿರುವುದು ನೋವಿನ ಸಂಗತಿ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಂಕೇಗೌಡರು ಪುಸ್ತಕ ಭಂಡಾರವನ್ನೇ ಸೃಷ್ಟಿ ಮಾಡಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ. 20 ಲಕ್ಷಕ್ಕೂ ಹೆಚ್ಚು ಪುಸ್ತಕ ಸಂಗ್ರಹಿಸಿ ಸರಸ್ವತಿ ಪುತ್ರರಾಗಿರುವ ಅಂಕೇಗೌಡರನ್ನು ಎರಡನೇ ಶಂಕರಾಚಾರ್ಯ ಎಂದರೆ ತಪ್ಪಾಗಲಾರದು ಎಂದು ಬಣ್ಣಿಸಿದರು.
ಜನಾಂಗದ ಮುಖಂಡರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್, ಪುರಸಭೆ ಮಾಜಿ ಉಪಾಧ್ಯಕ್ಷ ಎಲ್.ಅಶೋಕ್, ಮಾಜಿ ಸದಸ್ಯ ಎನ್.ಚಂದ್ರಶೇಖರ್, ಮೆಡಿಕಲ್ ಜಗದೀಶ್, ಸೋಮಶೇಖರ್, ಅರಣ್ಯ ಇಲಾಖೆ ರಮೇಶ್, ವಕೀಲ ಶ್ರೀಧರ್, ಕಾರು ಚಾಲಕ ನಾರಾಯಣ, ವಿನಾಯಕ ಇತರರು ಇದ್ದರು.