ಆದಿರಂಗನ ದರ್ಶನಕ್ಕೆ ಸಹಸ್ರರಾರು ಭಕ್ತರು

ಪಟ್ಟಣದ ಶ್ರೀಆದಿರಂಗನಾಥಸ್ವಾಮಿ ದೇವಾಲಯ ಮುಂಭಾಗ ಶನಿವಾರ ಮುಂಜಾನೆ 4ರ ವೇಳೆ ಸಹಸ್ರಾರು ಸಂಖ್ಯೆಯ ಭಕ್ತರು ಶ್ರೀರಂಗನಾಥಸ್ವಾಮಿ ದರ್ಶನಕ್ಕಾಗಿ ರಾಜಗೋಪುರದ ಮುಂದೆ ಜಮಾಯಿಸಿದ್ದ ದೃಶ್ಯ.
ಪಟ್ಟಣದ ಶ್ರೀಆದಿರಂಗನಾಥಸ್ವಾಮಿ ದೇವಾಲಯ ಮುಂಭಾಗ ಶನಿವಾರ ಮುಂಜಾನೆ 4ರ ವೇಳೆ ಸಹಸ್ರಾರು ಸಂಖ್ಯೆಯ ಭಕ್ತರು ಶ್ರೀರಂಗನಾಥಸ್ವಾಮಿ ದರ್ಶನಕ್ಕಾಗಿ ರಾಜಗೋಪುರದ ಮುಂದೆ ಜಮಾಯಿಸಿದ್ದ ದೃಶ್ಯ.
Published on
ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀ ಆದಿರಂಗನಾಥಸ್ವಾಮಿ ದರ್ಶನಕ್ಕಾಗಿ ಆಗಮಿಸಿದ್ದ ಸಹಸ್ರರಾರು ಸಂಖ್ಯೆಯ ಭಕ್ತರು ದೇಗುಲದೊಳಗೆ ಪ್ರವೇಶಿಸಲು ಮುಗಿಬಿದ್ದು, ನೂಕು ನುಗ್ಗಲು ಉಂಟಾಯಿತು.
ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಶನಿವಾರ ಮುಂಜಾನೆ 3ರ ವೇಳೆಗೆ ಧನುರ್ಮಾಸದ ಹಿನ್ನೆಲೆಯಲ್ಲಿ ತ್ರಿರಂಗ (ಮೂರು ರಂಗನ) ದರ್ಶನಕ್ಕಾಗಿ ಸಂಕಲ್ಪ ಹೊತ್ತ ಜಿಲ್ಲೆ, ರಾಜ್ಯ ಸೇರಿದಂತೆ ಹೊರರಾಜ್ಯಗಳಾದ ತಮಿಳುನಾಡು, ಆಂಧ್ರ ಹಾಗೂ ಕೇರಳದಿಂದ ಆಗಮಿಸಿದ್ದ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ದೇವಾಲಯದ ರಾಜಗೋಪುರದ ಮುಂದೆ ಜಮಾಯಿಸಿ ಒಮ್ಮೆಲೆ ಒಳನುಗ್ಗಲು ಯತ್ನಿಸಿದ್ದು, ದೇಗುಲದ ಸಿಬ್ಬಂದಿ ಹಾಗೂ ಪೊಲೀಸರು ನಿಯಂತ್ರಿಸುವಲ್ಲಿ ಹೈರಾಣಾದರು.
ಇತ್ತ ದೇವಾಲಯದ ಆಡಳಿತ ವತಿಯಿಂದ ಕಳೆದ ಕೆಲ ದಿನಗಳಿಂದ 50 ರೂ. ಹಾಗೂ 500 ರೂ.ದರದ ದೇಗುಲಕ್ಕೆ ಕಾಣಿಕೆ ಸಂಗ್ರಹದ ಟಿಕೆಟ್ ನೀಡುವ ಮೂಲಕ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಸ್ಥಳೀಯ ಕೆಲ ಸಂಘಟನೆಗಳು ಹಾಗೂ ಕೆಲ ರಾಜಕಾರಣಿಗಳ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜ.9ರ ಶುಕ್ರವಾರದಿಂದ ಈ ಕಾರ್ಯ ಸ್ಥಗಿತಗೊಳಿಸಲಾಯಿತು. ಆದರೆ ಶನಿವಾರ ಒಮ್ಮೆಲೆ ಹರಿದುಬಂದ ಭಕ್ತರು ಶಿಂಷಾ ಹಾಗೂ ತಮಿಳುನಾಡಿನ ಶ್ರೀರಂಗಂ ದರ್ಶನಕ್ಕೆ ತೆರಳುವ ಹಿನ್ನೆಲೆಯಲ್ಲಿ ಹಾಗೂ ಸ್ವಾಮಿಯ ದರ್ಶನಕ್ಕೆ ಇರುವ ಎಲ್ಲ ಸರತಿ ಸಾಲುಗಳಲ್ಲೂ ಜನರು ಏಕಾಏಕಿ ನುಗ್ಗಿದ ಪರಿಣಾಮ ಸಮಸ್ಯೆ ಏರ್ಪಟ್ಟಿತು. ಈ ನಡುವೆ ವಿಐಪಿ ಹಾಗೂ ವಿವಿಐಪಿಗಳ ಭೇಟಿಯ ಒತ್ತಡವೂ ಸಹ ಸಮಸ್ಯೆಗೆ ಇನ್ನಷ್ಟು ಕಾರಣವಾಗಿ ಪೊಲೀಸರು ಮತ್ತು ದೇಗುಲ ಸಿಬ್ಬಂದಿಯೊಂದಿಗೆ ಭಕ್ತರು ಪ್ರವೇಶಕ್ಕೆ ಜಟಾಪಟಿಗಿಳಿದು ದೇಗುಲ ಮುಂಭಾಗ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಸಹ ದೋಡಿ ಗಲಾಟೆ ನಡೆಸುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು. ಅಲ್ಲದೆ ಭಕ್ತರೇ 1 ಸಾವಿರ ರೂ.ವಾದರೂ ಪಡೆದು ಒಳಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು.
ಡಿ.17ರಿಂದ ಜ.10ರ ಶನಿವಾರದ ಈ ವರೆಗೂ 1.70 ಕೋಟಿ ರೂ. ಗೂ ಅಧಿಕ ಜನರು ಶ್ರೀರಂಗನಾಥಸ್ವಾಮಿಯ ದರ್ಶನ ಪಡೆದಿದ್ದು, ದೇಗುಲದ ಕೇವಲ 15 ಜನ ಸಿಬ್ಬಂದಿ ಹಾಗೂ ಪೊಲೀಸರು ಮುಂಜಾನೆ 2 ಗಂಟೆ ಪ್ರತಿದಿನ 10.30ವರೆಗೂ ಕಾರ್ಯ ನಿರ್ವಹಿಸುತ್ತಿದ್ದು, ಬಸವಳಿದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net