ಶಾಲೆಗಳ ಆಸ್ತಿ ಸಂರಕ್ಷಿಸಲು ಇ-ಸ್ವತ್ತು ಮಾಡಿಸಿಕೊಡಿ

ಕೆ.ಆರ್.ಪೇಟೆ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳಾಗಿ ನಿಯೋಜನೆಗೊಂಡಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು.
ಕೆ.ಆರ್.ಪೇಟೆ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳಾಗಿ ನಿಯೋಜನೆಗೊಂಡಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು.
Published on
ಕೆ.ಆರ್.ಪೇಟೆ: ವಿದ್ಯಾರ್ಥಿಗಳ ಕೊರತೆಯಿಂದ ತಾಲೂಕಿನ ಕೆಲವು ಕಡೆ ಸರ್ಕಾರಿ ಶಾಲೆಗಳು ಮುಚ್ಚಿವೆ. ಮುಚ್ಚಿಹೋದ ಸರ್ಕಾರಿ ಶಾಲೆಗಳ ಕಟ್ಟಡ, ಆಟದ ಮೈದಾನ ಸೇರಿದಂತೆ ಶಾಲೆಗಳ ಆಸ್ತಿಯನ್ನು ಸಂರಕ್ಷಣೆ ಮಾಡಲು ಶಾಲಾ ಆಸ್ತಿಯನ್ನು ಇ-ಸ್ವತ್ತು ಮಾಡಿಸಿಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಮನವಿ ಮಾಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳಾಗಿ ನಿಯೋಜನೆಗೊಂಡಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ಕ್ರಮ ವಹಿಸುವಂತೆ ಕೋರಿದರು.
ಸರ್ಕಾರಿ ಶಾಲಾ ಆಸ್ತಿಯನ್ನು ಉಳಿಸಲು ಪಿಡಿಒಗಳು ಸಹಕರಿಸಬೇಕು. ಅನಗತ್ಯ ಕಾರಣಗಳನ್ನು ಹೇಳದೆ ಶಾಲಾ ಆಸ್ತಿಯನ್ನು ಇ-ಸ್ವತ್ತು ಮಾಡಿಕೊಡುವಂತೆ ಮನವಿ ಮಾಡಿದ ತಿಮ್ಮೇಗೌಡ ಗ್ರಾಮೀಣ ಪ್ರದೇಶದ ಬಹುತೇಕ ಸರ್ಕಾರಿ ಶಾಲೆಗಳಿಗೆ ಅಲ್ಲಿನ ಹಿರಿಯರು ಈ ಹಿಂದೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಆದರೆ ಸರ್ಕಾರಿ ಆಸ್ತಿಯನ್ನು ನಿಖರವಾಗಿ ಅಳೆದು ಬೌಂಡರಿ ನಿರ್ಧರಿಸಲ್ಲ. ಈ ಕಾರಣದಿಂದ ದಾನಿಗಳ ಕುಟುಂಬಸ್ಥರು ಕೆಲವು ಕಡೆ ತಕರಾರು ತರುತ್ತಿದ್ದಾರೆ. ದಾನಿಗಳು ನೀಡಿದ ಜಾಗವನ್ನು ಅಳತೆ ಮಾಡಿಸಿ ಶಾಲಾ ಸ್ವಾಧೀನಕ್ಕೆ ನೀಡಿದರೆ ಅವುಗಳ ಇ-ಸ್ವತ್ತು ಪ್ರಕ್ರಿಯೆಗೆ ದಾರಿ ಸುಗಮವಾಗುತ್ತದೆ. ಶಾಲೆಗೆ ಅಗತ್ಯವಾದ ಶೇ.75 ರಷ್ಟು ಭೂಮಿಯನ್ನು ದಾನವಾಗಿ ನೀಡಿದ ದಾನಿಗಳ ಹೆಸರನ್ನು ಆಯಾ ಶಾಲೆಗಳಿಗೆ ಇಡಲು ಅವಕಾಶವಿದೆ. ದಾನಿಗಳ ಹೆಸರಿಡುವ ಬಗ್ಗೆ ದಾನಿಗಳ ಕುಟುಂಬಸ್ಥರು ನೀಡಿದ ಮನವಿಯನ್ನು ಪಿಡಿಒಗಳು ಪರಿಶೀಲಿಸಿ ವರದಿ ನೀಡಿದರೆ ಶಿಕ್ಷಣ ಇಲಾಖೆಯ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದೆಂದು ತಿಳಿಸಿದರು.'
ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಹವಾಲು ಆಲಿಸಿ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಸರ್ಕಾರಿ ಆಸ್ತಿ ಸಂರಕ್ಷಣೆ ಅಧಿಕಾರಿಗಳ ಜವಾಬ್ದಾರಿ. ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ಪಿಡಿಒಗಳು ಅಗತ್ಯ ಸಹಕಾರ ನೀಡಬೇಕು. ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಸರ್ಕಾರಿ ಶಾಲಾ ಮೈದಾನದಲ್ಲಿಯೇ ವ್ಯಕ್ತಿಯೊಬ್ಬರೂ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದನ್ನು ನೋಡಿಯೂ ಅಲ್ಲಿನ ಪಿಡಿಒ ಕಣ್ಣು ಮುಚ್ಚಿ ಕುಳಿತಿದ್ದಾರೆ. ಕೆಲವು ಕಡೆ ಪಿಡಿಒಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಇ-ಸ್ವತ್ತು ಮಾಡಿ ಗೊಂದಲ ಸೃಷ್ಟಿಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಗಳ ಅರಿವು ಪಿಡಿಒಗಳಿಗಿರಬೇಕು. ಗ್ರಾಪಂ ಅನುಮತಿಯಿಲ್ಲದೆ ರಸ್ತೆ ಅಗೆಯುವುದು ಸೇರಿದಂತೆ ಯಾವುದೇ ಅಕ್ರಮ ಕಾಮಗಾರಿ ನಡೆದರೂ ಅದನ್ನು ನಿಯಂತ್ರಿಬೇಕಾದ ಜವಾಬ್ದಾರಿ ಪಿಡಿಒಗಳಿಗೆ ಸೇರಿದೆ. ಪಿಡಿಒಗಳು ತಮ್ಮ ಅಧಿಕಾರ ಬಳಕೆ ಮಾಡಬೇಕು. ಸರ್ಕಾರಿ ಶಾಲೆಗಳ ಆಸ್ತಿಯನ್ನು ಇ-ಸ್ವತ್ತು ಮಾಡಿ ಅವುಗಳನ್ನು ಸಂರಕ್ಷಣೆ ಮಾಡುವಂತೆ ತಾಕೀತು ಮಾಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಜಿಪಂ ಕುಡಿಯುವ ನೀರು ವಿಭಾಗದ ಇಂಜಿನಿಯರ್ ರಶ್ಮಿ, ಪಶು ಸಂಗೋಪನಾ ಇಲಾಖೆಯ ಡಾ.ದೇವರಾಜು, ನೀರಾವರಿ ಇಲಾಖೆಯ ಎಂಜಿನಿಯರ್ ಚಂದ್ರೇಗೌಡ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬಸವೇಗೌಡ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿ ಅಧಿಕಾರಿಗಳು ಮತ್ತು ಪಿಡಿಒಗಳು ಸಭೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net