ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಅಡಗನಹಳ್ಳಿ ಗ್ರಾಮದ ವಿವಿಧ ದೇವಾಲಯಗಳಲ್ಲಿ ಗುರುವಾರ ರಾತ್ರಿ ಸರಣಿ ಕಳ್ಳತನವಾಗಿದೆ.
ಗ್ರಾಮದ ಮಹದೇವಮ್ಮ ಹಾಗೂ ಗುಡ್ಡೆ ನಿಂಗೇಶ್ವರ ದೇವಸ್ಥಾನಗಳಲ್ಲಿ ಹುಂಡಿಯನ್ನು ಕದ್ದು ಸಮೀಪದ ನಾಲೆಗೆ ಹುಂಡಿಯನ್ನು ಎಸೆದು ಸುಮಾರು ಐದು ಲಕ್ಷ ರೂ.ಹಾಗೂ ಗುಂಜಮ್ಮ ದೇಗುಲದಲ್ಲಿ ದೇವರ ಚಿನ್ನದ ತಾಳಿ ಹಾಗೂ ಬೆಳ್ಳಿ ಪದಾರ್ಥಗಳನ್ನು ಕದ್ದು ಪರಾರಿಯಾಗಿದ್ದಾರೆ.
ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಮಂಚಮ್ಮ ದೇವಿ ನೂತನ ವಿಗ್ರಹ ಪ್ರತಿಷ್ಠಾಪನ ಧಾರ್ಮಿಕ ಕಾರ್ಯಕ್ರಮ ಇದ್ದುದ್ದರಿಂದ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿತ್ತು. ಆದ್ದರಿಂದ ಇದನ್ನು ಗಮನಿಸಿ ಕಳ್ಳರು ಕಳ್ಳತನ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೂರು ದೇಗುಲಗಳು ಒಂದೇ ಕಡೆ ಇರುವುದರಿಂದ ದೇಗುಲಗಳಲ್ಲಿ ಹಲವಾರು ಬಾರಿ ಕಳ್ಳತನ ನಡೆದಿದ್ದರೂ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಕೆಸ್ತೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.