ಸೈನಿಕರ ಸೇವೆ ಸದಾ ಸ್ಮರಿಸೋಣ

 ನಾಗಮಂಗಲ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಬಿ.ಚಲುವರಾಜು ಸ್ಮಾರಕ್ಕೆ ಪುಷ್ಪಗುಚ್ಛ ಅರ್ಪಿಸಿದರು.
ನಾಗಮಂಗಲ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಬಿ.ಚಲುವರಾಜು ಸ್ಮಾರಕ್ಕೆ ಪುಷ್ಪಗುಚ್ಛ ಅರ್ಪಿಸಿದರು.
Published on
ನಾಗಮಂಗಲ: ದೇಶದ ಜನರ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ವರ್ಷಾನುಗಟ್ಟಲೆ ದೇಶದ ಗಡಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರ ಸೇವೆಯನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಡಿವೈಎಸ್‌ಪಿ ಬಿ.ಚಲುವರಾಜು ಹೇಳಿದರು.
ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನ ಎದುರು ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ, ಆಟೋ ಚಾಲಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ರಾಷ್ಟ್ರದ ಮೇಲೆ ನೆರೆಯ ರಾಷ್ಟ್ರಗಳು ದಾಳಿ ಮಾಡುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸೈನಿಕರು ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಭಾರತದ ಪ್ರಜೆಗಳಾದ ನಾವು ನೆಮ್ಮದಿಯಿಂದ ಇದ್ದೇವೆಂದರೆ ಅದಕ್ಕೆ ನಮ್ಮ ಹೆಮ್ಮೆಯ ಸೈನಿಕರೇ ಕಾರಣ. ದೇಶದ ಗಡಿ ಕಾಯುತ್ತಿರುವ ಸೈನಿಕರ ಜತೆಗೆ ಅವರ ಪರಿಶ್ರಮ ಮತ್ತು ಸಾಹಸವನ್ನು ಸ್ಮರಿಸಬೇಕು ಎಂದು ಹೇಳಿದರು.
ಎಆರ್‌ಟಿಒ ಹೊನ್ನೇಗೌಡ ಮಾತನಾಡಿ, ಗಡಿಭಾಗದಲ್ಲಿ ಹಗಲಿರುಳು ದೇಶವನ್ನು ಕಾಯುತ್ತಿರುವ ಸೈನಿಕರ ತ್ಯಾಗ ಬಲಿದಾನದಿಂದಾಗಿ ದೇಶದ ಪ್ರತಿಯೊಬ್ಬ ನಾಗರಿಕರು ನೆಮ್ಮದಿಯಾಗಿದ್ದೇವೆ. ರೈತರು ಮತ್ತು ಸೈನಿಕರು ದೇಶದ ಬೆನ್ನೆಲುಬು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎಂ.ಸಿ.ಚನ್ನಪ್ಪ ಮಾತನಾಡಿ, ಇಂದಿನ ಯುವ ಪೀಳಿಗೆಗೆ ದೇಶಪ್ರೇಮದ ಮೌಲ್ಯಗಳನ್ನು ತಲುಪಿಸುವುದು ಅತ್ಯಗತ್ಯ. ಶಾಲಾ ಕಾಲೇಜು ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು.
ಕಾರ್ಗಿಲ್ ವಿಜ ದಿವಸ್ ಕುರಿತು ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಟಿ.ಸಿ.ಕುಮಾರ್ ಮಾತನಾಡಿದರು. ನಂತರ ಅಮರ್ ಜವಾನ್ ಭಾವಚಿತ್ರವನ್ನು ಸೌಮ್ಯಕೇಶವಸ್ವಾಮಿ ದೇವಸ್ಥಾನದಿಂದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತು.
ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಟಿ.ಮರೀಗೌಡ, ಉಪಾಧ್ಯಕ್ಷ ಬಿ.ನಾರಾಯಣ, ಕಾರ್ಯದರ್ಶಿ ಟಿ.ಸಿ.ಕುಮಾರ್, ಟಿ.ಎನ್.ಪ್ರಕಾಶ್, ಖಜಾಂಚಿ ಎಸ್.ನಾಗರಾಜ್, ನಿವೃತ್ತ ದೈಹಿಕ ಶಿಕ್ಷಕ ಶಿವಣ್ಣಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್, ಆರ್‌ಎಸ್‌ಎಸ್ ಮುಖಂಡ ವಸಂತಕುಮಾರ್, ಶ್ರೀನಿವಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net