ಮುಂದಿನ ಪೀಳಿಗೆಗೆ ಮಂಟೇಸ್ವಾಮಿ ಪರಂಪರೆ ಪರಿಚಯವಾಗಲಿ

ಹೊನ್ನಾಯಕನಹಳ್ಳಿ ಮಠದ ಸಮೀಪದಲ್ಲಿ ಶ್ರೀ ಗುರು ಸಿದ್ದಪ್ಪಾಜಿ ಜಾತ್ರೆ ಹಾಗೂ ಸೇವಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಜಾನಪದ ಕಾರ್ಯಕ್ರಮಕ್ಕೆ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸು ಚಾಲನೆ ನೀಡಿದರು. ಡಾ.ಮಳವಳ್ಳಿ ಮಹದೇವಸ್ವಾಮಿ, ಸಿದ್ದೇಗೌಡ, ಪ್ರಕಾಶ್, ಕುಳ್ಳಪ್ಪ, ಸ್ವಾಮಿ, ಶ್ರೀನಿವಾಸ್, ರಾಜಣ್ಣ, ವಿಷಕಂಠ, ಯೋಗಾನಂದ, ವೆಂಕಟಪ್ಪ, ನಂಜುಂಡಪ್ಪ, ಸೋಮಜಮ್ಮ ಇದ್ದರು.
ಹೊನ್ನಾಯಕನಹಳ್ಳಿ ಮಠದ ಸಮೀಪದಲ್ಲಿ ಶ್ರೀ ಗುರು ಸಿದ್ದಪ್ಪಾಜಿ ಜಾತ್ರೆ ಹಾಗೂ ಸೇವಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಜಾನಪದ ಕಾರ್ಯಕ್ರಮಕ್ಕೆ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸು ಚಾಲನೆ ನೀಡಿದರು. ಡಾ.ಮಳವಳ್ಳಿ ಮಹದೇವಸ್ವಾಮಿ, ಸಿದ್ದೇಗೌಡ, ಪ್ರಕಾಶ್, ಕುಳ್ಳಪ್ಪ, ಸ್ವಾಮಿ, ಶ್ರೀನಿವಾಸ್, ರಾಜಣ್ಣ, ವಿಷಕಂಠ, ಯೋಗಾನಂದ, ವೆಂಕಟಪ್ಪ, ನಂಜುಂಡಪ್ಪ, ಸೋಮಜಮ್ಮ ಇದ್ದರು.
Published on
ಕೆ.ಎಂ.ದೊಡ್ಡಿ: ಜಾತ್ಯತೀತ ಮತ್ತು ಸರಳತೆಯೊಂದಿಗೆ 600 ವರ್ಷಗಳಿಂದಲೂ ಮಂಟೇಸ್ವಾಮಿ, ಸಿದ್ದಪ್ಪಾಜಿ ನೀಲಗಾರರ ಪರಂಪರೆಯನ್ನು ಜೀವಂತವಾಗಿ ಉಳಿಸಿ ಬೆಳೆಸಿಕೊಂಡು ಬರಲಾಗುತ್ತಿದೆ ಎಂದು ಮಳವಳ್ಳಿ ಹೊನ್ನಾಯಕಹಳ್ಳಿ ಮಂಟೇಸ್ವಾಮಿ ಮಠ ಹಾಗೂ ಕಪ್ಪಡಿ ಕ್ಷೇತ್ರದ ಮಠಾಧೀಶರಾದ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸು ತಿಳಿಸಿದರು.
ಹೊನ್ನಾಯಕನಹಳ್ಳಿ ಮಠದ ಸಮೀಪದಲ್ಲಿ ಶ್ರೀ ಗುರು ಸಿದ್ದಪ್ಪಾಜಿ ಜಾತ್ರೆ ಹಾಗೂ ಸೇವಾ ಮಹೋತ್ಸವದ ಅಂಗವಾಗಿ ಮೈಸೂರಿನ ಪಡುವರಹಳ್ಳಿ ಅಶ್ವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಹಳ್ಳಿ ಹಕ್ಕಿ ಹಾಡು ಜಾನಪದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೂರ್ವಜರು ನೀಲಗಾರರ ಸೇವೆಗಳ ಪರಂಪರೆಯನ್ನು ಹಿಂದಿನಿಂದಲೂ ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮಂಟೇಸ್ವಾಮಿ ಪರಂಪರೆಯನ್ನು ಅರ್ಥಮಾಡಿಕೊಂಡು ಮುಂದಕ್ಕೆ ಕೊಂಡೊಯ್ಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಂಟೇಸ್ವಾಮಿ, ನೀಲಗಾರರ ಪರಂಪರೆಯಲ್ಲಿ ಆಡಂಬರವಿಲ್ಲ. ಸರಳತೆಯನ್ನು ಕಾಪಾಡುವುದು ಮುಖ್ಯವಾಗಿದೆ. ಮಂಟೇಸ್ವಾಮಿ ವಿಚಾರಗಳನ್ನು ಅರ್ಥಮಾಡಿಕೊಂಡು ಜೀವನ ರೂಪಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.
ಕಲಾವಿದರಾದ ಮಳವಳ್ಳಿ ಮಹದೇವಸ್ವಾಮಿ ಅವರು ಜಾನಪದ ಕಲೆಯನ್ನು 50 ವರ್ಷಗಳಿಂದ ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಜಾನಪದ ಕಲೆಯ ಮೂಲಕ ಮಹನೀಯರ ಚರಿತ್ರೆ ಜಗತ್ತಿಗೆ ತಿಳಿಯಲಿ ಎಂದರು.
ಮರಗಳ ಹನನ, ಪ್ಲಾಸ್ಟಿಕ್ ಬಳಕೆಯಿಂದ ಅತಿವೃಷ್ಟಿ, ಅನಾವೃಷ್ಟಿಯಂತಹ ಸನ್ನಿವೇಶಗಳು ಎದುರಾಗುತ್ತಿವೆ. ಗಿಡಗಳನ್ನು ಬೆಳೆಸಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದರ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ಮಂಟೇಸ್ವಾಮಿ ನಾಡಿಗೆ ಮಳೆಯನ್ನು ನೀಡಿ ಸಮೃದ್ಧಿ ಬೆಳೆ ಬೆಳೆದು ರೈತರು ನೆಮ್ಮದಿ ಜೀವನ ಸಾಗಿಸುವಂತಾಗಲಿ ಎಂದು ಆಶೀಸಿದರು.
ಜಾನಪದ ಕಲಾವಿದ ಡಾ.ಮಳವಳ್ಳಿ ಮಹದೇವಸ್ವಾಮಿ ಮಾತನಾಡಿ, ಗ್ರಾಮೀಣ ಜಾನಪದ ಕಲೆಗಳು ಉಳಿಯಬೇಕು. ಎಲೆಮರೆ ಕಾಯಿಯಂತಿರುವ ಪ್ರತಿಭೆಗಳು ಹೊರ ತರುವ ಪ್ರಯತ್ನವನ್ನು ಅಶ್ವ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಜಾನಪದ ಗಾಯನ, ಸೋಬಾನೆ ಪದ, ಪೂಜಾ ಕುಣಿತ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ಮುಖಂಡರಾದ ಸಿದ್ದೇಗೌಡ, ಪ್ರಕಾಶ್, ಕುಳ್ಳಪ್ಪ, ಸ್ವಾಮಿ, ಶ್ರೀನಿವಾಸ್, ರಾಜಣ್ಣ, ವಿಷಕಂಠ, ಯೋಗಾನಂದ, ವೆಂಕಟಪ್ಪ, ನಂಜುಂಡಪ್ಪ, ಸೋಮಜಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net