ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೊಠಡಿಗಳನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಹರೀಶ್ ಬಾಬು, ಧನಂಜಯ, ಬಿ.ಬಸವರಾಜು, ತೈಲೂರು ಚೆಲುವರಾಜು. ಅಮೀನ್ ಶಿವಲಿಂಗಯ್ಯ. ಬಿ.ಎಸ್.ಬೊರೇಗೌಡ, ನಿಂಗಯ್ಯ, ಪ್ರೇಮ್ ಕುಮಾರ್, ಕಿರಣ್ ಕುಮಾರ್‌ಮತ್ತಿತರರು ಇದ್ದರು.
ಸರ್ಕಾರಿ ಶಾಲೆಗಳ ಮಹತ್ವ ಅಮೂಲ್ಯವಾದದ್ದು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಸಮೀಪದ ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಮಾರು 29 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ದೇಶದ ಪ್ರಧಾನಿ, ಮುಖ್ಯಮಂತ್ರಿಗಳಂತಹ ಉನ್ನತ ಸ್ಥಾನಗಳಿಗೇರಿದ್ದಾರೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದು ಕ್ಷೇತ್ರದ ಜನರ ಇಚ್ಛೆಯಂತೆ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇನೆ ಎಂದರು.
ಮದ್ದೂರು ಕ್ಷೇತ್ರದ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಈಗಾಗಲೇ ನಾಲ್ಕೈದು ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿಸಿ ತರಲಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ತಾಲೂಕಿನಾದ್ಯಾಂತ 5 ಹೈಟೆಕ್ ಶಾಲೆಗಳ ನಿರ್ಮಾಣ ಮಾಡುವ ಗುರಿ ಹೊಂದಿದೆ. ಹೈಟೆಕ್ ಶಾಲೆಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಿ ಭವಿಷ್ಯದಲ್ಲಿ ದೇಶ ಕಟ್ಟುವ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಹಗಲಿರುಳು ಶ್ರಮಿಸುತ್ತೇನೆ ಎಂದರು.
ತುರ್ತು ಆಗತ್ಯತೆಯ ಮೇರೆಗೆ ಸುಣ್ಣದದೊಡ್ಡಿ ಗ್ರಾಮದ ಶಾಲೆಗೆ 2 ಕೊಠಡಿಗಳು, ಅರುವನಹಳ್ಳಿ ಗ್ರಾಮದಲ್ಲಿ 2 ಕೊಠಡಿಗಳು ಮತ್ತು ನಿಡಘಟ್ಟ ಗ್ರಾಮದಲ್ಲಿ 5 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಶಿಕ್ಷಣವೇ ಅತ್ಯಮೂಲ್ಯ ಆಸ್ತಿಯಾಗಬೇಕು ಎಂದರು.
ಮನ್‌ಮುಲ್ ಅಧ್ಯಕ್ಷ ಹರೀಶ್ ಬಾಬು, ಬಿಇಒ ಧನಂಜಯ, ಮದ್ದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ತೈಲೂರು ಚೆಲುವರಾಜು. ಅಮೀನ್ ಶಿವಲಿಂಗಯ್ಯ. ಬಿ.ಎಸ್.ಬೊರೇಗೌಡ, ನಿಂಗಯ್ಯ, ಪ್ರೇಮ್ ಕುಮಾರ್, ಕಿರಣ್ ಕುಮಾರ್, ಶಾಲಾ ಮುಖ್ಯಶಿಕ್ಷಕ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರು ಸಿಬ್ಬಂದಿ ಇತರರು ಇದ್ದರು.