ಮಳವಳ್ಳಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಳವಳ್ಳಿ ಮೀಸಲು ಕ್ಷೇತ್ರದಿಂದ ಹೊಸ ಅಭ್ಯರ್ಥಿಯನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಬೇಕೆಂದು ಹಲವು ಮುಖಂಡರು ಒತ್ತಾಯಿಸಿದರು.
ತಾಲೂಕಿನ ತಮ್ಮಡಹಳ್ಳಿ ಸಮೀಪದ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟೇಶ್, ಜೆಡಿಎಸ್‌ನಲ್ಲಿ ಯಾವುದೇ ಬಂಡಾಯವಿಲ್ಲ. ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸದಿರುವ ಮಾಜಿ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎನ್ನುವುದು ನಮ್ಮೆಲ್ಲರ ಒತ್ತಾಯ. ಈ ವಿಚಾರವಾಗಿ ಜೆಡಿಎಸ್ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್ ಮಾತನಾಡಿ, ಪಕ್ಷದ ಮುಖಂಡ ಜವರೇಗೌಡ ಅವರು ಸ್ನೇಹ ಪೂರ್ವಕವಾಗಿ ದೇವರ ಸೇವೆ ಇಟ್ಟಿಕೊಂಡಿದ್ದಾರೆ. ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿರುವ ಡಾ.ಚಂದ್ರಶೇಖರ್ ಅವರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಗುತ್ತಿದೆ. ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಬೇಡ ಎಂದು ಸಮಜಾಯಿಸಿ ನೀಡಲು ಮುಂದಾದರು.
ಈ ವೇಳೆ ಜೆಡಿಎಸ್ ಹಿರಿಯ ಮುಖಂಡ ವೀರೇಗೌಡ ಮಾತನಾಡಿ, ಮಾಜಿ ಶಾಸಕ ಡಾ.ಅನ್ನದಾನಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗುತ್ತಿದೆ. ಜೆಡಿಎಸ್‌ಗೆ ಹೊಸ ಅಭ್ಯರ್ಥಿ ಅವಶ್ಯಕತೆ ಇದೆ. ಸ್ಪರ್ಧೆ ಮಾಡುವ ಆಶಯ ಹೊಂದಿರುವ ಡಾ.ಚಂದ್ರಶೇಖರ್ ಮೊದಲು ತಾಲ್ಲೂಕಿನಾದ್ಯಂತ ಪಕ್ಷ ಸಂಘಟನೆಗೆ ಮುಂದಾಗಲಿ ಎಂದರು.
ಜೆಡಿಎಸ್ ಮುಖಂಡ ಜವರೇಗೌಡ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್‌ಗೆ ತನ್ನದೇ ಆದ ಸಾಮರ್ಥ್ಯವಿದೆ. ಹೊಸಬರು ಬರಲಿ ಎನ್ನುವ ಅಭಿಪ್ರಾಯ ಪಕ್ಷದಲ್ಲಿಯೂ ಕೇಳಿ ಬರುತ್ತಿದೆ. ವೈದ್ಯರಾಗಿರುವ ಚಂದ್ರಶೇಖರ್ ಅವರು ರಾಜಕೀಯ ಪ್ರವೇಶ ಮಾಡಲು ಕ್ಷೇತ್ರಕ್ಕೆ ಬಂದಿದ್ದು, ಸಹಕಾರ ನೀಡಬೇಕೆಂದು ಕೋರಿದರು.
ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಮಾತನಾಡಿದ ಡಾ.ಚಂದ್ರಶೇಖರ್, ವೈದ್ಯಕೀಯ ವೃತ್ತಿ ಜತೆಗೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇದೆ. ಇದಕ್ಕೆ ತಮ್ಮೆಲ್ಲರ ಬೆಂಬಲ ಅಗತ್ಯ. ವೈದ್ಯಕೀಯ ಕ್ಷೇತ್ರದಲ್ಲಿ ಅಂತಾರಾಷ್ಟೀಯ ಮಟ್ಟದಲ್ಲಿ ಸೇವೆ ಸಲ್ಲಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ತಾಲೂಕಿನಲ್ಲಿ ಆರೋಗ್ಯ ಕಿಟ್ ವಿತರಿಸಿದ್ದೇನೆ ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಪ್ರಶಾಂತ್, ಸಿದ್ದರಾಜು, ಜಿಪಂ ಮಾಜಿ ಸದಸ್ಯ ಹನುಮಂತು, ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ಚಂದಳ್ಳಿ ಶ್ರೀಧರ್, ಚೊಟ್ಟನಹಳ್ಳಿ ಕೆಂಪಲಿಂಗು ಸೇರಿದಂತೆ ನೂರಕ್ಕೂ ಹೆಚ್ವು ಮುಖಂಡರು ಇದ್ದರು.