ಮಂಡ್ಯ: ತಾಲೂಕಿನ ಕೆರಗೋಡು ಹೋಬಳಿ ಕೆ.ಗೌಡಗೆರೆ ಗ್ರಾಮದ ಕಬ್ಬಿನ ಗದ್ದೆಯಲ್ಲಿಟ್ಟಿದ್ದ ಬೋನಿನಲ್ಲಿ ಭಾನುವಾರ ಗಂಡು ಚಿರತೆ ಸೆರೆಯಾಗಿದೆ. ಗ್ರಾಮದ ಪ್ರಕಾಶ್ ಅವರ ಗದ್ದೆಯಲ್ಲಿ ಚಿರತೆ ಸಂಚಾರ ಕಂಡುಬಂದಿದೆ ಎಂದು ಅರಣ್ಯ ಇಲಾಖೆಗೆ ಶುಕ್ರವಾರ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶನಿವಾರ ಕಬ್ಬಿನ ಗದ್ದೆಯಲ್ಲಿ ಬೋನು ಇಟ್ಟು ನಾಯಿಯನ್ನು ಕಟ್ಟಿದ್ದರು. ಭಾನುವಾರ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಗೆ ವೈದ್ಯಕೀಯ ತಪಾಸಣೆ ಮಾಡಿಸಿದರು. ಬಂಡೀಪುರ ಅಥವಾ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಬಿಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.