ಪಾಂಡವಪುರ: ಕೆಆರ್‌ಎಸ್ ಅಣೆಕಟ್ಟೆಯ ಕ್ರೆಸ್ಟ್ ಗೇಟ್‌ಗಳ ದುರಸ್ತಿ ನಡೆಯುತ್ತಿದ್ದು, ಮುಗಿದ ಬಳಿಕ ಜನಜಾನುವಾರು ಹಾಗೂ ಒಣಗುತ್ತಿರುವ ಬೆಳೆಗಳಿಗೆ ಒಂದು ಕಟ್ಟುನೀರು ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಕೆನ್ನಾಳು, ಹರಳಹಳ್ಳಿ ಹಾಗೂ ವಿಶ್ವೇಶ್ವರನಗರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಾಲೆಗೆ ನೀರು ಹರಿಸುವ ಸಂಬಂಧವಾಗಿ ಈಗಾಗಲೇ ಮುಖ್ಯಮಂತ್ರಿ, ಶಾಸಕ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರು ಕಡಿಮೆಯಾಗಿರುವುದರಿಂದ ಕ್ರೆಸ್ಟ್ ಗೇಟ್‌ಗಳ ಸಣ್ಣಪುಟ್ಟ ದುರಸ್ತಿ ಕಾರ್ಯ ನಡೆಯುತ್ತಿದೆ. ಪೂರ್ಣಗೊಂಡ ಬಳಿಕ ಕಟ್ಟು ನೀರು ಹರಿಸುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿದ್ದು, ಕಾಮಗಾರಿ ಮುಗಿದ ಬಳಿಕ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ತಾಲೂಕಿನಲ್ಲಿ ನಡೆಯುತ್ತಿರುವ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗಳು ದೊಡ್ಡ ಸಮಸ್ಯೆಯಾಗಿದೆ. ಯೋಜನೆ ಸರಿಯಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಕ್ಕೆ ಬರುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಗ್ರಾಪಂ ಸದಸ್ಯರು ನಿಂತುಕೊಂಡು ಯೋಜನೆ ಮಾಡಿಸಿಕೊಂಡಿದ್ದಾರೆ. ಆದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕೆಲವು ಗುತ್ತಿಗೆದಾರರು ಅರ್ಧಕ್ಕೆ ಕೆಲಸ ನಿಲ್ಲಿಸಿ ಹೋಗಿದ್ದಾರೆ. ಗುತ್ತಿಗೆದಾರರು ಕೈಗೆ ಸಿಗುತ್ತಿಲ್ಲ. ಹೀಗಾಗಲೇ ಒಮ್ಮೆ ಎಲ್ಲ ಗುತ್ತಿಗೆದಾರರ ಸಭೆ ನಡೆಸಿ ಖಡಕ್ ಸೂಚನೆ ನೀಡಲಾಗಿದೆ. ಜೇವರ್ಗಿ ಮುಖ್ಯರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.
ತಾಲೂಕಿನ ವಿಶ್ವೇಶ್ವರನಗರದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಲು ಬಂದ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರು ನಮ್ಮ ಬಡಾವಣೆಯ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕರು, ಹಂತಹಂತವಾಗಿ ಕಾಮಗಾರಿ ಮಾಡುತ್ತಿದ್ದೇವೆ. ಇನ್ನೂ ಒಂದು ತಿಂಗಳ ಒಳಗೆ ನಿಮ್ಮ ಬಡಾವಣೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು.
ಸಂದರ್ಭದಲ್ಲಿ ರೈತಸಂಘದ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ವಿಜಯ್‌ಕುಮಾರ್, ನಾಗರಾಜು, ಚಿದಾನಂದ್, ಮಹೇಶ್, ಹರ್ಷ, ಪುಟ್ಟರಾಜು, ಚಂದ್ರಶೇಖರ್, ರಾಮಚಂದ್ರು, ಪೈ.ಶಂಕರ್, ಬಾಲಕೃಷ್ಣ, ಪುರುಷೋತ್ತಮ್, ಪರಮೇಶ್, ಗುತ್ತಿಗೆದಾರ ನರಸಿಂಹಮೂರ್ತಿ, ಎಇಇ ಜೈಕುಮಾರ್, ಎಇ ರಾಕೇಶ್ ಇದ್ದರು.