ಎಸ್.ಎಂಕೃಷ್ಣಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಿ

ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ತಾಲೂಕು ಘಟಕ ಹಾಗೂ ಚುಂಚಶ್ರೀ ಗೆಳೆಯರ ಬಳಗದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ನಿವೃತ್ತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿಗೆ ಶ್ರೀ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಕೆ.ಎಂ.ಉದಯ್, ನೆಲ್ಲಿಗೆರೆ ಬಾಲು, ರಾಘವೇಂದ್ರ, ಡಾ.ಬಿ.ಕೃಷ್ಣ, ವಿ.ಟಿ.ರವಿಕುಮಾರ್, ಪಿ.ಸಂದರ್ಶ ಇದ್ದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ತಾಲೂಕು ಘಟಕ ಹಾಗೂ ಚುಂಚಶ್ರೀ ಗೆಳೆಯರ ಬಳಗದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ನಿವೃತ್ತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿಗೆ ಶ್ರೀ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಕೆ.ಎಂ.ಉದಯ್, ನೆಲ್ಲಿಗೆರೆ ಬಾಲು, ರಾಘವೇಂದ್ರ, ಡಾ.ಬಿ.ಕೃಷ್ಣ, ವಿ.ಟಿ.ರವಿಕುಮಾರ್, ಪಿ.ಸಂದರ್ಶ ಇದ್ದರು.
Published on
ಮದ್ದೂರು: ಮಾಜಿ ಮುಖ್ಯಮಂತ್ರಿ ಎಸ್.ಎಂಕೃಷ್ಣ ಅವರು ರಾಜ್ಯಕ್ಕೆ ಹಾಗೂ ಬೆಂಗಳೂರು ನಗರಕ್ಕೆ ಅನನ್ಯ ಕೊಡುಗೆ ನೀಡಿರುವುದನ್ನು ಪರಿಗಣಿಸಿ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಒತ್ತಾಯಿಸಿದರು.
ನಗರದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ತಾಲೂಕು ಘಟಕ ಹಾಗೂ ಚುಂಚಶ್ರೀ ಗೆಳೆಯರ ಬಳಗದಿಂದ ಶನಿವಾರ ರಾತ್ರಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಅಭಿವೃದ್ಧಿಪಡಿಸಿದ ಎಸ್.ಎಂ ಕೃಷ್ಣ ಅವರ ಸಾಧನೆಯನ್ನು ಮಾತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ. ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಇಟ್ಟುಕೊಂಡು ಎಸ್.ಎಂ.ಕೃಷ್ಣ ಹಲವಾರು ಸಾಧನೆ ಮಾಡಿದ್ದಾರೆ. ಮುಂಬರುವ ದಿನಮಾನಗಳಲ್ಲಿ ಎಸ್.ಎಂ ಕೃಷ್ಣರವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಸಮುದಾಯಕ್ಕೆ ಬಹುದೊಡ್ಡ ಕೊಡುಗೆ ನೀಡಲು ಶಾಸಕರು ಹಾಗೂ ಒಕ್ಕಲಿಗರ ಸಂಘದ ನಿರ್ದೇಶಕರು ಮುಖ್ಯಮಂತ್ರಿಗೆ ಮನವಿ ಮಾಡಬೇಕು ಎಂದರು.
ರಾಜ್ಯ ಒಕ್ಕಲಿಗರ ಸಂಘದ ಖಾತೆಯಲ್ಲಿ ಕೋಟ್ಯಂತರ ರೂ.ನಿಧಿ ಸಂಗ್ರಹವಾಗಿದೆ. ಈ ಹಣವನ್ನು ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಬಳಸಬೇಕು. ಪ್ರತಿ ವರ್ಷ ನೀಟ್ ಪರೀಕ್ಷೆಯಲ್ಲಿ ಅಲ್ಪ ಅಂತರದಲ್ಲಿ ವೈದ್ಯಕೀಯ ಸೀಟು ವಂಚಿತರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿಶೇಷ ಪರೀಕ್ಷೆ ನಡೆಸಿ ಜಿಲ್ಲೆಯ ನಿರ್ದೇಶಕರ ಸಂಖ್ಯೆಗೆ ಅನುಗುಣವಾಗಿ ಅಷ್ಟೇ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಸೀಟು ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಒಕ್ಕಲಿಗ ಸಮುದಾಯಕ್ಕಾಗಿ ರಾಜ್ಯದ ಪ್ರತಿಯೊಂದು ತಾಲೂಕು, ಜಿಲ್ಲೆಯಲ್ಲೂ ವಿದ್ಯಾರ್ಥಿನಿಲಯ, ಸಮುದಾಯದ ಭವನಗಳನ್ನು ನಿರ್ಮಿಸಬೇಕು. ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಕ್ಕೆ ಹೆಚ್ಚಿನ ಶಕ್ತಿ ತುಂಬುವಂತಹ ಕೆಲಸವಾಗಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಸಂಘದ ವತಿಯಿಂದ ಅಭಿನಂದಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಎಂ.ಉದಯ್, ಇತರ ಸಮುದಾಯಗಳು ತಮ್ಮ ಜಾತಿಯ ಮಹನೀಯರ ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ, ಒಕ್ಕಲಿಗ ಸಮುದಾಯದಲ್ಲಿ ಒಳ ಜಗಳ, ಭಿನ್ನಾಭಿಪ್ರಾಯ, ವೈಮನಸ್ಸಿನಿಂದ ಪ್ರತ್ಯೇಕವಾಗಿ ಜಯಂತಿ ಆಚರಣೆ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.
ಕಾರ್ಯಕ್ರಮಕ್ಕೆ ಸೀಮಿತ ಸಂಖ್ಯೆಯ ಜನರು ಭಾಗವಹಿಸುತ್ತಿರುವುದು ಸಮುದಾಯದ ಒಗ್ಗಟ್ಟಿಗೆ ಧಕ್ಕೆಯಾಗುತ್ತಿದೆ. ಪ್ರತಿಯೊಬ್ಬರೂ ಸಂಘಟಿತರಾಗಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಬೇಕೆ ಹೊರತು ಸಂಘಟನೆಯ ವಿಚಾರ ಬಂದಾಗ ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರು ಶ್ರೀ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕೆಂಪೇಗೌಡರು ವಿವಿಧ ಜಾತಿ, ಧರ್ಮದ ಜನರನ್ನು ಒಗ್ಗೂಡಿಸಿ ಬೆಂಗಳೂರಿನ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ವಿಶ್ವ ಮಟ್ಟದಲ್ಲಿ ಬೆಂಗಳೂರು ನಗರವನ್ನು ಗುರುತಿಸಲು ಕಾರಣರಾದವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ. ಒಕ್ಕಲಿಗ ಸಮುದಾಯದ ಎಲ್ಲ ಸಂಘಟನೆಗಳು ಮತ್ತು ಮುಖಂಡರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಎಸ್.ಆರ್.ಭುವನ್‌ಗೌಡನನ್ನು ಅಭಿನಂದಿಸಲಾಯಿತು. ಉಪನ್ಯಾಸಕ ಪ್ರೊಫೆಸರ್ ಎಚ್.ನಾಗರಾಜು ಉಪನ್ಯಾಸ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ನೆಲ್ಲಿಗೆರೆ ಬಾಲು, ರಾಘವೇಂದ್ರ, ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಟಿ.ರವಿಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಎಪಿಎಂಸಿ ಮಾಜಿ ಉಪಾಧ್ಯಕ್ಷೆ ಮಮತಾ ಶಂಕರೇಗೌಡ, ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ಆರ್.ಅನಂತೇಗೌಡ, ಅಖಿಲ ಕರ್ನಾಟಕ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಶಿವಲಿಂಗಯ್ಯ, ನಿರ್ದೇಶಕರಾದ ಪಿ.ಶಿವಪ್ಪ, ಸುರೇಶ್, ದೇವಕುಮಾರ್, ಶಿವಲಿಂಗಯ್ಯ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net