ರಾಜ್ಯದ ವಿವಿಧೆಡೆಯಿಂದ ರಾಸುಗಳ ಆಗಮನ

ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ರೈತ ಕಿರಣ್ಗೂಳಿ ಅವರು ಜಾತ್ರೆಯಲ್ಲಿಕಟ್ಟಿರುವ 16 ಲಕ್ಷ ರೂ.ವೆಚ್ಚದ ಹಳ್ಳಿಕಾರ್ ತಳಿಯ ರಾಸುಗಳು ಜಾತ್ರೆ ಆಕರ್ಷಣೆಯಾಗಿರುವುದು.
ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ರೈತ ಕಿರಣ್ಗೂಳಿ ಅವರು ಜಾತ್ರೆಯಲ್ಲಿಕಟ್ಟಿರುವ 16 ಲಕ್ಷ ರೂ.ವೆಚ್ಚದ ಹಳ್ಳಿಕಾರ್ ತಳಿಯ ರಾಸುಗಳು ಜಾತ್ರೆ ಆಕರ್ಷಣೆಯಾಗಿರುವುದು.
Published on
*ಉತ್ತಮ ಜಾನುವಾರುಗಳಿಗೆ ಬಹುಮಾನ
ಎಂ.ಪಿ.ವೆಂಕಟೇಶ್ ಮದ್ದೂರು
ಶ್ರೀ ಮದ್ದೂರಮ್ಮ ಜಾತ್ರಾ ಮಹೋತ್ಸವ ಹಾಗೂ ಶ್ರೀ ನರಸಿಂಹಸ್ವಾಮಿ ಬ್ರಹ್ಮೋತ್ಸವದ ಅಂಗವಾಗಿ ನಗರದಲ್ಲಿ ಪ್ರತಿವರ್ಷ ನಡೆಯುವ ಭಾರಿ ದನಗಳ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಾಸುಗಳು ಆಗಮಿಸಿ ಜಾತ್ರೆಗೆ ಕಳೆತಂದಿವೆ.
ಮದ್ದೂರಿನಲ್ಲಿ ಏ.25ರಿಂದ ಏ.30ರವರೆಗೆ ದನಗಳ ಜಾತ್ರೆ ನಡೆಯಲಿದೆ. ಜಾತ್ರೆಗೆ ಬೆಂಗಳೂರು, ಆನೇಕಲ್, ಮೈಸೂರು, ತುಮಕೂರು, ಹಾಸನ, ಚಿಕ್ಕಮಗಳೂರು, ಸೇರಿದಂತೆ ವಿವಿಧ ಭಾಗಗಳಿಂದ ರೈತರು ದನಗಳನ್ನು ಕರೆತಂದು ಕಟ್ಟುತ್ತಿದ್ದಾರೆ. ರೈತರು ಖರೀದಿಗೆ ಬರುತ್ತಿರುವುದರಿಂದ ಜಾತ್ರೆ ಈ ವರ್ಷ ಮತ್ತಷ್ಟು ವಿಶೇಷತೆಯನ್ನು ಪಡೆದುಕೊಂಡಿದೆ.
ಜಾತ್ರೆಯಲ್ಲಿ ಹಳ್ಳಿಕಾರ್ ತಳಿಗಳೇ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದ್ದರೂ, 10 ಸಾವಿರದಿಂದ 16 ಲಕ್ಷ ರೂ.ವರೆಗೆ ದನಗಳು ವ್ಯಾಪಾರವಾಗುತ್ತಿವೆ. ಜತೆಗೆ ಹಾಲಲ್ಲು, 2 ಹಲ್ಲು, 4 ಹಲ್ಲಿನ ಹಸುಗಳು, ಕಡೆ ಎತ್ತುಗಳು, ಹೋರಿಗಳು, ಕುರಿಗಳು, ಕುದುರೆಗಳು ಜಾತ್ರೆಯ ವೈಶಿಷ್ಟ್ಯತೆಯನ್ನು ಹೆಚ್ಚಿಸಿವೆ. ಜಾತ್ರೆಯಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಟಗರುಗಳು ಪಾಲ್ಗೊಂಡಿರುವುದು ಮತ್ತೊಂದು ವಿಶೇಷವಾಗಿದೆ.
ಹಿಂದಿನ ವರ್ಷಗಳಲ್ಲಿ ಜಾತ್ರೆಯಲ್ಲಿ ದನಗಳನ್ನು ಕಟ್ಟಲು ಸ್ಥಳಾವಕಾಶದ ಕೊರತೆಯಿತ್ತು, ಆದರೆ ಇತ್ತೀಚೆಗೆ ಪೇಟೆಬೀದಿ ರಸ್ತೆ ವಿಸ್ತರಣೆ ಮಾಡುವ ಉದ್ದೇಶದಿಂದ ನಗರಸಭೆಯಿಂದ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮೊದಲಿಗಿಂತ ಈಗ ಹೆಚ್ಚಿನ ಸ್ಥಳಾವಕಾಶ ಸಿಕ್ಕಿದ ಹಿನ್ನೆಲೆಯಲ್ಲಿ ಹೆಚ್ಚಿನ ದನಗಳನ್ನು ಕಟ್ಟಲು ರೈತರಿಗೆ ಅನುಕೂಲವಾಗಿದೆ.
ಜಾತ್ರೆಗೆ ತಾಲೂಕು ಆಡಳಿತ ವತಿಯಿಂದ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಾಸುಗಳ ತಪಾಸಣೆಗೆ ಪಶು ವೈದ್ಯರ ನೇಮಕ, ಜಾತ್ರೆಯಲ್ಲಿ ಹಣಕಾಸಿನ ವ್ಯವಹಾರ ನಡೆಯುವುದರಿಂದ ಪೊಲೀಸ್ ಬಂದೋಬಸ್ತ್ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿರುವುದು ರೈತರಿಗೆ ಸಂತಸ ತಂದಿದೆ.
ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಆಗಮಿಸುವುದರಿಂದ ಹಾಗೂ ರಾಸುಗಳನ್ನು ಕಟ್ಟಲು ಅದ್ದೂರಿಯಾಗಿ ಶಾಮಿಯಾನ, ಧ್ವನಿವರ್ಧಕ, ವಿದ್ಯುತ್ ದೀಪಾಲಂಕಾರ ಹಾಗೂ ಸಂಜೆಯಾದ ನಂತರ ರಾಸುಗಳನ್ನು ಮದುವಣಗಿತ್ತಿಯಂತೆ ಅಲಂಕರಿಸಿ ಅದ್ದೂರಿಯಾಗಿ ಮೆರವಣಿಗೆ ಮಾಡುವುದರಿಂದ ನಗರ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾತ್ರೆ ಆಗಮಿಸುತ್ತಿರುವುದು ಹಾಗೂ ಕುಟುಂಬ ಸಮೇತ ಜಾನುವಾರುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ವಿಶೇಷವಾಗಿದೆ.
ಈ ವರ್ಷ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉತ್ತಮ ರಾಸುಗಳಿಗೆ ಹಾಗೂ ಟಗರುಗಳಿಗೆ ಬಹುಮಾನ ಘೋಷಣೆ ಮಾಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಬರುತ್ತಿರುವುದರಿಂದ ಹಿಂದಿನ ಗತವೈಭವ ಜಾತ್ರೆಯಲ್ಲಿ ಮರುಕಳುಹಿಸುತ್ತಿದೆ.
ಬಾಕ್ಸ್ ಐಟಂ
ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ರೈತ ಕಿರಣ್‌ಗೂಳಿ ಅವರು ಜಾತ್ರೆಯಲ್ಲಿ ಕಟ್ಟಿರುವ 16 ಲಕ್ಷ ರೂ. ಮೌಲ್ಯದ ಹಳ್ಳಿಕಾರ್ ತಳಿಯ ರಾಸುಗಳು ಜಾತ್ರೆ ಆಕರ್ಷಣೆಯಾಗಿದ್ದು, ರಾಸುಗಳು ಚೊಟ್ಟನಹಳ್ಳಿ ಸೇರಿದಂತೆ 2 ಕಡೆ ಚಾಂಪಿಯನ್ ಪಟ್ಟ ಗಿಟ್ಟಿಸಿದೆ. ರಾಸುಗಳನ್ನು ಮಕ್ಕಳಂತೆ ಸಾಕುವ ಮೂಲಕ ಕಟ್ಟುಮಸ್ತಾಗಿ ರಾಸುಗಳನ್ನು ಸಾಕಿರುವುದು ಇವರಿಗೆ ರಾಸುಗಳಿಗೆ ಮೇಲೆ ಇರುವ ಪ್ರೀತಿ ತೋರಿಸುತ್ತದೆ.
ಏರ್ ಕೂಲರ್ ಬಳಕೆ: ಬಿಸಿಲಿನ ತಾಪ ಹೆಚ್ಚಿರುವ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ರಾಸುಗಳಿಗೆ ಬಿಸಿಲಿನ ತಾಪ ಕಡಿಮೆ ಮಾಡುವ ಉದ್ದೇಶದಿಂದ ಕೆಲವು ರೈತರು ತಮ್ಮ ಪ್ರೀತಿ ಪಾತ್ರವಾದ ಜಾನುವಾರುಗಳಿಗೆ ಏರ್ ಕೂಲರ್ ಹಾಗೂ ಪ್ಯಾನ್ ಬಳಕೆ ಮಾಡುತ್ತಿರುವುದು ವಿಶೇಷವಾಗಿದೆ.
ಬಂಪರ್ ವ್ಯಾಪಾರ: ಜಾತ್ರೆ ಹಿನ್ನೆಲೆಯಲ್ಲಿ ಹೋಟೆಲ್‌ಗಳು, ಹಣ್ಣಿನ ವ್ಯಾಪಾರಿಗಳು ಸೇರಿದಂತೆ ಇನ್ನಿತರ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ.
ಜಾತ್ರೆಗಳ ಮಹತ್ವ:
ದನಗಳ ಜಾತ್ರೆಗಳು ಭಾರತೀಯ ಕೃಷಿ ಸಂಸ್ಕೃತಿ, ಆರ್ಥಿಕತೆ ಮತ್ತು ಗ್ರಾಮೀಣ ಬಾಂಧವ್ಯದ ಸಂಕೇತಗಳಾಗಿವೆ. ಇವು ಉತ್ತಮ ತಳಿಯ ಜಾನುವಾರುಗಳ ಖರೀದಿ-ಮಾರಾಟಕ್ಕೆ ವೇದಿಕೆಯಾಗಿದ್ದು, ರೈತರಿಗೆ ಪಶುಸಂಗೋಪನೆ, ದೇಸಿ ತಳಿಗಳ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ.
ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಮತ್ತು ಹೊಸದನ್ನು ಖರೀದಿಸಲು ನೆರವಾಗುತ್ತದೆ, ಇದು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಹಳ್ಳಿಕಾರ್ ಮುಂತಾದ ಪ್ರಸಿದ್ಧ ದೇಸಿ ತಳಿಗಳ ಎತ್ತು, ಆಕಳುಗಳನ್ನು ಪ್ರದರ್ಶಿಸಲಾಗುತ್ತದೆ, ಇದು ತಳಿ ಸಂರಕ್ಷಣೆಗೆ ಉತ್ತೇಜನ ನೀಡುತ್ತದೆ. ಜಾತ್ರೆಗಳಲ್ಲಿ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸುವ ಮೂಲಕ ದೇವರಂತೆ ಆರಾಧಿಸಲಾಗುತ್ತದೆ. ದನಗಳ ಜಾತ್ರೆಗಳು ಕೇವಲ ವ್ಯಾಪಾರವಲ್ಲದೆ, ಕೃಷಿ ಸಂಸ್ಕೃತಿಯ ಜೀವಂತಿಕೆ ಮತ್ತು ಪಶು-ಮಾನವ ಬಾಂಧವ್ಯದ ಸಂಕೇತವಾಗಿದೆ.
ಚಾಂಪಿಯನ್‌ಗೆ 2 ಲಕ್ಷ ರೂ. ಬಹುಮಾನ: ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ದೂರು ಉತ್ಸವದ ಅಂಗವಾಗಿ ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳನ್ನು ಚಾಂಪಿಯನ್ ಎಂದು ಘೋಷಿಸಿ, ಕ್ರಮವಾಗಿ ಮೊದಲ ಚಾಂಪಿಯನ್‌ಗೆ 2 ಲಕ್ಷ ರೂ. ಎರಡನೇ ಚಾಂಪಿಯನ್‌ಗೆ 1 ಲಕ್ಷ ರೂ. ಮೂರನೇ ಚಾಂಪಿಯನ್‌ಗೆ 50 ಸಾವಿರ ನಗದು ಬಹುಮಾನ ಕೊಡುವ ಜತೆಗೆ 10 ರಾಸುಗಳಿಗೆ 10 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುವುದು. ಜಾತ್ರೆಯಲ್ಲಿ ಪಾಲ್ಗೊಳ್ಳುವ ಉತ್ತಮ ಟಗರುಗಳಿಗೂ ಕ್ರಮವಾಗಿ 10 ಸಾವಿರ ರೂ. ಹಾಗೂ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಬಹುಮಾನ ವಿಜೇತ ರಾಸುಗಳನ್ನು ಏ.30 ರಂದು ಮದ್ದೂರು ಪ್ರವಾಸಿ ಮಂದಿರ ಆವರಣದಿಂದ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದ ಆವರಣದವರೆಗೆ ಮೆರವಣಿಗೆ ಮೂಲಕ ಕರೆತಂದು ಸನ್ಮಾನಿಸಿ ಗೌರವಿಸಲಾಗುವುದು ಹಾಗೂ ಜಾತ್ರೆಯಲ್ಲಿ ಭಾಗವಹಿಸಿರುವ ರಾಸುಗಳ ನೆಲದ ಸುಂಕವನ್ನು ಟ್ರಸ್ಟ್ ವತಿಯಿಂದಲ್ಲೇ ಭರಿಸಲಾಗುವುದು.
ಕೆ.ಎಂ.ಉದಯ್, ಶಾಸಕ ಮದ್ದೂರು ವಿಧಾನಸಭಾ ಕ್ಷೇತ್ರ
ದನಗಳ ಜಾತ್ರೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಸುಗಳಿಗೆ ಬಹುಮಾನ ನೀಡುತ್ತಿರುವುದು ಹಾಗೂ ತಾಲೂಕು ಆಡಳಿತ ವತಿಯಿಂದ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿರುವುದು ಸಂತಸ ತಂದಿದೆ. ಆದ್ದರಿಂದ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಬರುತ್ತಿರುವುದು ವಿಶೇಷವಾಗಿದೆ.
ಕಿರಣ್ ಗೂಳಿ, ರೈತ, ಮಾರಸಿಂಗನಹಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net