ಕೆ.ಎಂ.ದೊಡ್ಡಿ: ಇಲ್ಲಿನ ಭಾರತೀ ಪದವಿ ಪೂರ್ವ ಕಾಲೇಜಿನ ಭಾರತೀ ಮತದಾರ ಸಾಕ್ಷರತಾ ಕ್ಲಬ್ ಹಾಗೂ ಸಮಾಜಶಾಸ್ತ್ರ ವಿಭಾಗದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಗುರುವಾರ ಜಾಥಾ ನಡೆಸಲಾಯಿತು.
ಕಾಲೇಜಿನ ಆವರಣದಿಂದ ಆರಂಭವಾದ ಜಾಥಾವು ಮೆಲ್ಲಹಳ್ಳಿ ಗ್ರಾಮದವರೆಗೆ ತೆರಳಿತು. ವಿದ್ಯಾರ್ಥಿಗಳು ಎಸ್‌ಐಆರ್ ಮಹತ್ವ, ಮತದಾನದ ಅಗತ್ಯತೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಜಾಥಾಗೆ ಪ್ರಾಂಶುಪಾಲೆ ಜಿ.ಬಿ.ಪಲ್ಲವಿ ಚಾಲನೆ ನೀಡಿ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರತಿಯೊಬ್ಬ ನಾಗರಿಕರ ಸಕ್ರಿಯ ಭಾಗವಹಿಸುವಿಕೆ ಅಗತ್ಯವಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಆಡಳಿತಾಧಿಕಾರಿ ಎಸ್.ಜವರೇಗೌಡ, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಲಾವಣ್ಯಾ, ಇತಿಹಾಸ ವಿಭಾಗದ ಉಪನ್ಯಾಸಕ ಹರ್ಷವರ್ಧನ್, ಕನ್ನಡ ವಿಭಾಗದ ಉಪನ್ಯಾಸಕ ರಾಜೇಂದ್ರ ಪ್ರಸಾದ್, ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಿ.ಕೆ.ಕೃಷ್ಣ, ಸಿಬ್ಬಂದಿ ಭಾಗವಹಿಸಿದ್ದರು.