ಕಿಕ್ಕೇರಿಯ ಕೇಂಬ್ರಿಡ್ಜ್ ಶಾಲಾವರಣದಲ್ಲಿ ಕರ್ನಾಟಕ ಪರಿಸರ ರಕ್ಷಣಾ ಪ್ರತಿಷ್ಠಾನ ವತಿಯಿಂದ ಸೋಮವಾರ ಪರಿಸರ ಪ್ರೇಮಿ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿಗೆ ಪರಿಸರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೆಂಕಟೇಶ್, ಅನುಪಮಾ, ಎಚ್.ಎಂ. ದೀಪಾ, ಶೇಕ್ಷವಲ್ಲಿ, ಕೋಮಲಾ ಇತರರಿದ್ದರು.
ಕಿಕ್ಕೇರಿ: ಪರಿಸರ ನಮ್ಮ ಬದುಕಿನ ಕೊಂಡಿಯಾಗಿದ್ದು, ಇದರೊಂದಿಗೆ ಬದುಕುವುದನ್ನು ಕಲಿತರೆ ಬಲು ಚಂದ ಎಂದು ಪರಿಸರ ಪ್ರೇಮಿ ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
ಇಲ್ಲಿನ ಕೇಂಬ್ರಿಡ್ಜ್ ಶಾಲಾವರಣದಲ್ಲಿ ಬೆಂಗಳೂರಿನ ಕರ್ನಾಟಕ ಪರಿಸರ ರಕ್ಷಣಾ ಪ್ರತಿಷ್ಠಾನ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪರಿಸರ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಗಾಯಕನಾಗಿ ನಮ್ಮೂರು ಕೀರ್ತಿ ಜತೆಯಲ್ಲಿ ಹೆಸರು ಗಳಿಸಿದೆ. ಕೋವಿಡ್ ವೇಳೆ ಆಕ್ಸಿಜೆನ್‌ಗೆ ಪರಿತಪಿಸಿದ ಕ್ಷಣ, ಅಮೂಲ್ಯ ಜೀವಗಳ ಮರಣ ಬೇಸರ ತಂದಿತು. ಪರಿಸರ ಉಳಿಸಿಕೊಂಡರೆ ಪ್ರಾಕೃತಿಕ ವಿಪತ್ತು ದೂರವಾಗಲಿದೆ. ಮರಗಿಡಗಳು ಜೀವಸಂಕುಲಕ್ಕೆ ಸಂಜೀವಿನಿ. ಪ್ರಕೃತಿ ಎಲ್ಲವನ್ನು ನಮಗೆ ಕೊಟ್ಟಿದೆ. ಆದರೆ ಇವುಗಳನ್ನು ಹನನ ಮಾಡಿ ನಮ್ಮ ಜೀವಕ್ಕೆ ನಾವೇ ಮಾರಕವಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಗಾಯನ ಕ್ಷೇತ್ರದ ಜತೆಯಲ್ಲಿ ಪರಿಸರ ಸಂರಕ್ಷಣೆಗಾಗಿ ಗಿಡ ನೆಟ್ಟು ಪೋಷಿಸುವ ಅಭಿಯಾನ ಆರಂಭಿಸಿರುವೆ. ಸಂಗೀತಪ್ರಿಯರು ನನ್ನ ಪರಿಸರ ಸಂರಕ್ಷಣೆ ಯಜ್ಞಕ್ಕೆ ಕೈಜೋಡಿಸುತ್ತಿರುವುದು ಮರೆಯಲಾರದ ಕ್ಷಣವಾಗಿದೆ. ರಾಜ್ಯಾದ್ಯಂತ ಹಮ್ಮಿಕೊಂಡಿರುವ ಸುಗಮ ಸಂಗೀತ ಯಾನದಲ್ಲಿ ಶಾಲಾ, ಕಾಲೇಜುಗಳಲ್ಲಿ ಮೊದಲು ವಿದ್ಯಾರ್ಥಿಗಳಿಗೆ ಗಿಡಮರ ನೆಟ್ಟು ಪೋಷಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಪರಿಸರದೊಂದಿಗೆ ಬದುಕುವ ಕಲೆ ಅನುಪಮ, ಆನಂದ ನೀಡಲಿದೆ ಎಂದು ನುಡಿದರು.
ಜಾಗತಿಕ ತಾಪಮಾನ ಹೆಚ್ಚಳದಿಂದ ಪ್ರಾಕೃತಿಕ ವಿಕೋಪ ಬಿಡದೆ ಕಾಡುತ್ತಿದೆ. ಪ್ರಕೃತಿ ಎಷ್ಟು ಸಹಿಸಿಕೊಳ್ಳಲು ಸಾಧ್ಯ. ಪ್ರಕೃತಿಯೊಂದಿಗೆ ಬದುಕುವ ಬದಲು ಕಾಡು ನಾಡಾಗಿ ಪರಿವರ್ತಿಸಲು ಹೋಗುವುದು ಸರಿಯಲ್ಲ. ಕಾಂಕ್ರೀಟ್ ಕಾಡಾಗಿ, ಮಣ್ಣಿನ ರಸ್ತೆ ದೂರವಾಗಿದೆ. ಭೂಮಿ ಒಡಲಿಗೆ ಮಳೆಯ ನೀರು ಹಿಂಗದಾಗಿದೆ. ಅಂರ್ತಜಲ ಕುಸಿಯುತ್ತಿದೆ. ಮನೆಗೊಂದು ಮರ ಆರೋಗ್ಯಕ್ಕೆ ನಂದನವನವಾಗಲಿದೆ. ಪ್ರಾಣಿ, ಪಕ್ಷಿಗಳಿಗಾಗಿ ಹಣ್ಣು ಹಂಪಲು ನೀಡುವ ಹಲಸು, ಮಾವು, ನೇರಳೆಯಂತಹ ಗಿಡ ನೆಡಲು ಸಂಕಲ್ಪ ತೊಡಿ ಎಂದು ವಿನಂತಿಸಿದರು.
ಅಕ್ಷರ ಬಾರದ ತಿಮ್ಮಕ್ಕ ಮರಗಿಡ ನೆಟ್ಟು ಸಾಲುಮರದ ವೃಕ್ಷಮಾತೆಯಾಗಿ ಅಮರರಾಗಿದ್ದಾರೆ. ನಮ್ಮ ಬದುಕು, ಸ್ವಾರ್ಥಕ್ಕಾದರೂ ಮರಗಿಡ ಉಳಿಸೋಣ. ಎಲ್ಲವನ್ನು ತಿಳಿದ ಅಕ್ಷರಸ್ಥರಾದ ನಾವು ಪ್ರಕೃತಿಗಾಗಿ ಕಿಂಚಿತ್ತಾದರೂ ಸೇವೆ ಮಾಡಿದರೆ ಇದೇ ನಾಡಿಗೆ ನೀಡುವ ಬಲುದೊಡ್ಡ ಕೊಡುಗೆ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿಕೊಂಡರು.
ಮುಂಗಾರ ಮಳೆ ಮೋಡ ಚಿತ್ತಾರ ಬಿಡಿಸತಾವೆ..., ಮಳೆಯಪ್ಪ ಮಳೆರಾಜ ಕರೆಯುತಾರೋ ನಿನ್ನ..., ಸುಗ್ಗಿ ಮಾಡೋಣ ಬಾರವ್ವ ಗೆಳತೀ..., ಉದಯಿಸುತಿಹನದೋ ಅಭಿನವ ದಿನಮಣಿ..., ಈ ತಾರೆ ಜುಳಜುಳನೆ ಹರಿವ ಜಲಧಾರೆ... ಮತ್ತಿತರ ಪರಿಸರ ಗೀತೆಗಳನ್ನು ಮಕ್ಕಳೊಂದಿಗೆ ಹಾಡಿ ಮಕ್ಕಳ ಮನದಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.