ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯ ಎಸ್ ವಿ ಎಂ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ಚಿಣ್ಣರ ಹಬ್ಬ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ.ಉದಯ್ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ರೂಪಾ ದೇವರಾಜು, ಡಿವೈಎಸ್ಪಿ ಯಶ್ವಂತ್ ಕುಮಾರ್, ಬಿಇಒ ಧನಂಜಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ, ತಿಮ್ಮ ದಾಸೇಗೌಡರು, ಮುನಿರಾಜು, ನಾಗೇಶ್, ಇತರರು ಇದ್ದರು.
ಮದ್ದೂರು: ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆಯುವ ಜತೆಗೆ ಜೀವನದಲ್ಲಿ ಶಿಸ್ತು, ಸಂಸ್ಕಾರ ಅಳವಡಿಸಿಕೊಂಡರೆ ಗುರಿ ಮಟ್ಟಲು ಸಾಧ್ಯ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಹೆಮ್ಮನಹಳ್ಳಿಯ ಎಸ್‌ವಿಎಂ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಚಿಣ್ಣರ ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟು ವ್ಯಾಸಂಗ ಮಾಡಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಹೊಂದಿ ಉನ್ನತ ಹುದ್ದೆ ಅಲಂಕರಿಸಿ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.
ಎಸ್‌ವಿಎಂ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಡಳಿತ ಮಂಡಳಿ ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಜತೆಗೆ ಕ್ರೀಡೆ, ವಿಜ್ಞಾನ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಿ ಅವರಲ್ಲಿರುವ ಪ್ರತಿಭೆಯನ್ನು ಹೊರ ತಂದು ವೇದಿಕೆ ಒದಗಿಸುತ್ತಿರುವುದು ಶಾಲೆಯ ಹೆಗ್ಗಳಿಕೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆಯಿದ್ದು, ಇಂತಹ ಪ್ರತಿಭೆಗಳನ್ನು
ಪಾಲಕರು ಮತ್ತು ಶಿಕ್ಷಕರು ಗುರುತಿಸಿ ಪ್ರೋತ್ಸಾಹ ನೀಡಿದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಎಸ್‌ವಿಎಂ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಡಳಿತ ಮಂಡಳಿ ಮುಂದಾಗಿರುವುದು ಪ್ರಶಂಸನೀಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ವಿದ್ಯೆಗಿರುವ ಮಹತ್ವ ಪ್ರಪಂಚದಲ್ಲಿ ಯಾವುದಕ್ಕೂ ಇಲ್ಲ. ವಿದ್ಯೆ ಯಾರೂ ಕದಿಯಲಾಗದ ಆಸ್ತಿ. ಇದನ್ನರಿತು ವಿದ್ಯಾರ್ಥಿಗಳು ವ್ಯಾಸಂಗದ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿದರು.
ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಪಾಲಕರಿಗೆ, ಗುರು, ಹಿರಿಯರಿಗೆ ಗೌರವ ಕೊಡುವ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಖೃತಿಕ ಕಾರ್ಯಕ್ರಮ ಪಾಲಕರ ಹಾಗೂ ಶಿಕ್ಷಕರ ಗಮನ ಸೆಳೆಯಿತು.
ಬಿಇಒ ಧನಂಜಯ, ಸಂಸ್ಥೆಯ ಅಧ್ಯಕ್ಷೆ ರೂಪಾ ದೇವರಾಜು, ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ್, ಇಸಿಒ ಎ.ಬಿ.ರಮೇಶ್, ಸಿಆರ್ಪಿ ಹನುಮಂತು, ಮುಖಂಡರಾದ ತಿಮ್ಮದಾಸೇಗೌಡ, ನಾರಾಯಣಸ್ವಾಮಿ, ಮುನಿರಾಜು, ಸೇರಿದಂತೆ ಇತರರು ಇದ್ದರು.