ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದು ಅಪರಾಧ

 ಪಟ್ಟಣದ ಬಸ್ ನಿಲ್ದಾಣದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿಸಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿಸಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಮಿಕ ಇಲಾಖೆಯ ನಿರೀಕ್ಷಕ ನಾಗರಾಜು ಮನವಿ
  • ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ
ಕೆ.ಆರ್.ಪೇಟೆ: ಬಾಲಕಾರ್ಮಿಕ ಪದ್ಧತಿ ನಾಗರಿಕ ಸಮಾಜಕ್ಕೆ ಅಂಟಿರುವ ಶಾಪ. ಶಾಲೆಗೆ ಹೋಗಿ, ಪಾಠ ಪ್ರವಚನವನ್ನು ಕಲಿಯಬೇಕಾದ ಮಕ್ಕಳನ್ನು ದುಡಿಮೆಗೆ ಹಾಕದೆ ಪಾಲಕರು ಕಡ್ಡಾಯವಾಗಿ ಶಾಲೆಗೆ ಕಳಿಸಿ ಭವಿಷ್ಯದ ನಾಗರಿಕರನ್ನಾಗಿ ರೂಪಿಸಬೇಕು ಎಂದು ಕಾರ್ಮಿಕ ಇಲಾಖೆಯ ನಿರೀಕ್ಷಕ ನಾಗರಾಜು ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಕಾರ್ಮಿಕ ಇಲಾಖೆ, ಬಾಲಕಾರ್ಮಿಕರ ಯೋಜನಾ ಸೊಸೈಟಿ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಕಾರ್ಯಾಲಯದ ವತಿಯಿಂದ ಕೃಷ್ಣರಾಜಪೇಟೆ ಪಟ್ಟಣದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಆವರಣದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಜಾಗೃತಿ, ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಯ ವಿರುದ್ಧ ಶುಕ್ರವಾರ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳೆ ನಾಳಿನ ಭವ್ಯ ಭಾರತದ ಪ್ರಜೆಗಳು. 18 ವರ್ಷದೊಳಗಿನ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚಿ ಬಾಲಕಾರ್ಮಿಕರನ್ನಾಗಿ ಮಾಡಬಾರದು. ಮಕ್ಕಳಿಗೆ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯನ್ನು ಕೊಡಿಸಿ ಭವ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸಲು ನಾಗರಿಕ ಸಮಾಜದ ಪ್ರತಿಯೊಬ್ಬರು ಕೈಜೋಡಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಶಾಲೆಗೆ ಹೋಗಿ ಪಾಠ ಕಲಿಯಬೇಕಾದ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಉಪಯೋಗಿಸಿಕೊಳ್ಳುವ ಅಂಗಡಿ ಮುಂಗಟುಗಳು, ಹೋಟೆಲ್‌ಗಳು ಹಾಗೂ ವರ್ಕ್ ಶಾಪ್‌ಗಳ ಮಾಲೀಕರಿಗೆ ದಂಡ ವಿಧಿಸುವ ಜತೆಗೆ ಕ್ರಿಮಿನಲ್ ಪ್ರಕರಣ ಕೂಡ ದಾಖಲು ಮಾಡಲಾಗುತ್ತದೆ. ಆದ್ದರಿಂದ ನಾಗರಿಕ ಸಮಾಜದಲ್ಲಿ ವಾಸ ಮಾಡುವ ಎಲ್ಲ ನಾಗರಿಕರು ಯಾವುದೇ ಸ್ಥಳದಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ಕೆಲಸ ಮಾಡಬಾರದು. ದುಡಿಯುವುದು ಕಂಡು ಬಂದರೆ ಕೂಡಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಕ್ಕಳು ರಾಷ್ಟ್ರದ ಸಂಪತ್ತು ಭವಿಷ್ಯದ ನಾಯಕರಾಗುವ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡಿ ಅವರ ಉಜ್ವಲವಾದ ಭವಿಷ್ಯವನ್ನು ಹಾಳು ಮಾಡಬೇಡಿ. ಹೆಣ್ಣು ಮಕ್ಕಳಿಗೆ 21 ವರ್ಷ ತುಂಬುವವರೆಗೆ ಮದುವೆ ಮಾಡಬಾರದು ಎಂಬ ಸಾಮಾಜಿಕ ಸಂದೇಶ ನೀಡುವ ಬೀದಿ ನಾಟಕವನ್ನು ಸೌಹಾರ್ದ ಸಂಸ್ಕೃತಿಕ ಕಲಾ ಸಂಘದ ಕಲಾವಿದರು ಮನಮುಟ್ಟುವಂತೆ ನಾಟಕದಲ್ಲಿ ಅಭಿನಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಅಶೋಕ್, ಮಾಜಿ ಅಧ್ಯಕ್ಷ ಕೆ.ಸಿ.ವಾಸು, ಕೆ.ಎಚ್.ರಾಮಕೃಷ್ಣ, ಪುರಸಭೆ ಸದಸ್ಯ ಡಿ.ಪ್ರೇಮ್ ಕುಮಾರ್, ಕೆ.ಆರ್.ರವೀಂದ್ರಬಾಬು, ರೈತ ನಾಯಕ ಮರುವನಹಳ್ಳಿ ಶಂಕರ್, ಹಿರಿಯ ಪತ್ರಕರ್ತಬಳ್ಳೇಕೆರೆ ಮಂಜುನಾಥ್ ಎಂ.ಕೆ. ಹರಿಚರಣ ತಿಲಕ್, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಅಗ್ರಹಾರ ಬಾಚಹಳ್ಳಿ ಆರ್.ಶ್ರೀನಿವಾಸ್, ಸೈಯದ್ ಖಲೀಲ್, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net