ಪರಂಪರೆ ಉಳಿಸಿಕೊಂಡು ಬಂದಿರುವ ಕಲಾವಿದರು: ರಂಗಕರ್ಮಿ ಬಿ.ಸುರೇಶ ಹೇಳಿಕೆ

ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಆಪ್ತ ಸಂವಾದದಲ್ಲಿ ರಂಗಕರ್ಮಿ ಬಿ.ಸುರೇಶ ಮಾತನಾಡಿದರು.
ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಆಪ್ತ ಸಂವಾದದಲ್ಲಿ ರಂಗಕರ್ಮಿ ಬಿ.ಸುರೇಶ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಗಾಂಧಿಭವನದಲ್ಲಿ ಆಪ್ತ ಸಂವಾದ
  • ಕನ್ನಡ ಕರ್ನಾಟಕ ಫೌಂಡೇಷನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಕಲಾವಿದರು ಬೀದಿ ನಾಟಕದ ಮೂಲಕ ಪೌರಾಣಿಕ ಹಾಗೂ ಧಾರ್ಮಿಕವಾಗಿ ಒಂದು ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಚಿತ್ರ ನಿರ್ದೇಶಕ, ನಟ, ರಂಗಕರ್ಮಿ ಬಿ.ಸುರೇಶ ಹೇಳಿದರು.
ನಗರದ ಗಾಂಧಿಭವನದಲ್ಲಿ ಕನ್ನಡ ಕರ್ನಾಟಕ ಫೌಂಡೇಷನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಆಪ್ತ ಸಂವಾದ 3ನೇ ಸಂಚಿಕೆಯಲ್ಲಿ ‘ಅಡುಗೆ ಮನೆಯಲ್ಲೊಂದು ಹುಲಿ’ ನಾಟಕದ ಲೇಖಕ ಬಿ.ಸುರೇಶ ಅವರೊಂದಿಗೆ ಲೇಖಕ, ಕಿರುಚಿತ್ರ ನಿರ್ದೇಶಕ ಎಂ.ಜಿ.ವಿನಯ್‌ಕುಮಾರ್ ನಡೆಸಿದ ಆಪ್ತ ಸಂವಾದದಲ್ಲಿ ಮಾತನಾಡಿದ ಅವರು, ಜನಪದ ಕಲೆಗಳಲ್ಲಿ ಒಂದು ಪ್ರಕಾರವಾದ ಬೀದಿ ನಾಟಕಗಳು ದನಿಯಿಲ್ಲದವರ ದನಿಯಾಗುವ ವೇದಿಕೆಯಾಗಿದೆ. ಇದನ್ನು ಇಂದು ಸರ್ಕಾರಗಳು ತಮ್ಮ ಯೋಜನೆಗಳ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ವಿಚಿತ್ರವಾಗಿದೆ ಎಂದರು.
ತಮ್ಮ ಕೃತಿಯಲ್ಲಿನ ಎಲ್ಲ ಪಾತ್ರಗಳ ಬಗ್ಗೆ ವಿವರಿಸಿದ ಸುರೇಶ್ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಮಾಧ್ಯಮಗಳು ಹೇಳದ್ದನ್ನು ಬೀದಿ ನಾಟಕಗಳು ಸಶಕ್ತವಾಗಿ ಜನರಿಗೆ ಧಾಟಿಸುತ್ತಿವೆ. ಕಳೆದ ವರ್ಷ ದೇಶದಲ್ಲಿ ಸುಮಾರು ಒಂದೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಯಾವ ಮೀಡಿಯಾ ರೈತರ ಪರ ದನಿಯಾಗಿದ್ದವು. ಸುಳ್ಳು ಹೇಳೋ ಸಿನಿಮಾ ಮಾಡುವ ನಾವು ಕೂಡ ಪ್ರಧಾನ ಮಂತ್ರಿಯೇ ಸುಳ್ಳು ಹೇಳುತ್ತಾರೆ ನಾವೇಕೆ ಮಾಡಬಾರದು ಎಂಬ ಮನೋಭಾವ ಇಲ್ಲಿದೆ. ಕಲಾವಿದರಾದವರು ಒಂದು ತತ್ವ ಸಿದ್ಧಾಂತವನ್ನು ಪಾಲಿಸಬೇಕು. ಅದು ಬಿಟ್ಟು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಡೆದುಕೊಳ್ಳುವವನು ಕಲಾವಿದನೇ ಅಲ್ಲ ಎಂದರು.
ಇತ್ತೀಚಿನವರೆಗೆ ಜನರಲ್ಲಿ ಸರ್ಕಾರಿ ಕೆಲಸದ ಬಗ್ಗೆ ಇನ್ನಿಲ್ಲದ ಆಸಕ್ತಿಯಿತ್ತು. ಬಳಿಕ ಖಾಸಗೀಕರಣಕ್ಕೆ ಭಾರತವೂ ತೆರೆದುಕೊಂಡ ಮೇಲೆ ವಿದೇಶಗಳಲ್ಲಿ ಭಾರತೀಯ ಉದ್ಯೋಗಿಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಯಿತು. ಆದರೇನು ಖಾಸಗೀಕರಣದ ದೊಡ್ಡ ಸಮಸ್ಯೆಯೆಂದರೆ ಅಭದ್ರತೆಯ ಬದುಕು. ಮೊನ್ನೆ ಅಮೆರಿಕಾದಲ್ಲಿ ಖಾಸಗಿ ಕಂಪನಿ ಏಕಾಏಕಿ 30 ಸಾವಿರ ಉದ್ಯೋಗಿಗಳನ್ನು ಹೊರ ಹಾಕಿದರು. ಅಮೆಜಾನ್ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರ ಭವಿಷ್ಯವೂ ಡೋಲಾಯಮಾನವಾಗಿದೆ. ಖಾಸಗೀಕರಣದಲ್ಲಿ ಜೀವನ ಭದ್ರತೆ ಎಂಬುದಿಲ್ಲ. ಬಂಡವಾಳ ಶಾಹಿಗಳು ಹೆಚಚಾದರೆ ಕೋಮುವಾದಕ್ಕು ಹೆಚ್ಚು ಬಲ ಬರುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net