ಪಾಂಡವಪುರ ತಾಲೂಕಿನ ಬೇಬಿ ಮತ್ತು ಹಾಗನಹಳ್ಳಿ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣ ಹಾಗೂ ಪಿಕ್ ಅಫ್ ನಾಲೆ ಅಭಿವೃದ್ಧಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ಸಲ್ಲಿಸಿದರು. ಎ.ಎಲ್.ಕೆಂಪೂಗೌಡ, ವೈ.ಪಿ.ಮಂಜು ಇತರರಿದ್ದರು.
ಪಾಂಡವಪುರ: ತಾಲೂಕಿನ ಬೇಬಿ ಕೆರೆಗೆ ತೂಬು ನಿರ್ಮಾಣ, ಕಾಲುವೆ ಅಭಿವೃದ್ಧಿ, ಕೋಡಿ ಹಳ್ಳಕ್ಕೆ ರಕ್ಷಣಾ ಗೋಡೆ ಮತ್ತು ಹಾಗನಹಳ್ಳಿ ಪಿಕ್‌ಅಪ್ ಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಲಾಗಿದ್ದು ಕಾಮಗಾರಿಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಬೇಬಿ ಮತ್ತು ಹಾಗನಹಳ್ಳಿ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣ ಹಾಗೂ ಪಿಕ್‌ಅಪ್ ನಾಲೆ ಅಭಿವೃದ್ಧಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯ 3.10 ಕೋಟಿ ರೂ.ಅನುದಾನದಲ್ಲಿ ಬೇಬಿ ಮತ್ತು ಹಾಗನಹಳ್ಳಿ ಗ್ರಾಮಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಈ ಭಾಗದ ರೈತರ ಮನವಿಯಂತೆ ಚೆಕ್ ಡ್ಯಾಂ ಅಭಿವೃದ್ಧಿಪಡಿಸಲಾಗುತ್ತಿದ್ದು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಈ ಹಿಂದೆ ತಾಲೂಕಿನಲ್ಲಿ ನಿರ್ಮಾಣವಾಗಿರುವ ಕೆಲವು ಚೆಕ್ ಡ್ಯಾಂಗಳಿಗೆ ತೆರಳಿ ಗುಣಮಟ್ಟ ಪರಿಶೀಲಿಸಿದಾಗ ತೀರಾ ಕಳಪೆಯಾಗಿರುವುದು ಕಂಡು ಬಂದಿದೆ. ಈ ಚೆಕ್ ಡ್ಯಾಂಗಳನ್ನು ನಾವು ಮರು ನಿರ್ಮಾಣ ಮಾಡಿದ್ದೇವೆ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ನಿಗದಿತ ಸಮಯದೊಳಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಲಾಗಿದೆ ಎಂದರು.
ನೀರು ಹರಿಸಲು ತ್ವರಿತ ಕ್ರಮ:
ರೈತರ ಹೋರಾಟದ ಫಲವಾಗಿ ವಿಶ್ವೇಶ್ವರಯ್ಯ ನಾಲೆಗೆ ಕಟ್ಟು ಪದ್ಧತಿಯಡಿ ಈಗಾಗಲೇ ನೀರು ಹರಿಸಲಾಗುತ್ತಿದೆ. ಅದರಂತೆ ಹೇಮಾವತಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಬೇಕು ಎಂಬುದು ನಮ್ಮ ಆಗ್ರಹ. ಸಣ್ಣ ನೀರಾವರಿ ಇಲಾಖೆ, ಹೇಮಾವತಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಕೆರೆ-ಕಟ್ಟೆಗಳನ್ನು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆ ಇದೆ. ಹೀಗಾಗಿ, ಹೇಮಾವತಿ ನಾಲೆಗಳ ಮೂಲಕ ಕ್ಷೇತ್ರದ ಮೇಲುಕೋಟೆ, ಚಿನಕುರಳಿ ಹಾಗೂ ದುದ್ದ ಭಾಗದ ಕೆರೆ-ಕಟ್ಟೆಗಳನ್ನು ತುಂಬಿಸಲು ಚರ್ಚಿಸಲಾಗಿದೆ ಎಂದರು.
ರೈತರ ಹಣ ಶೀಘ್ರ ಬಿಡುಗಡೆ
ಪಟ್ಟಣದ ಒಳಚರಂಡಿ ಕಾಮಗಾರಿಗೆ ಜಮೀನು ನೀಡಿದ್ದ ರೈತರು ಪರಿಹಾರದ ಬಾಕಿ ಹಣಕ್ಕಾಗಿ ನ್ಯಾಯಾಲಯದಿಂದ ಮೋರೆ ಹೋಗಿ ಪುರಸಭೆ ಚರ ಆಸ್ತಿಗಳ ಜಪ್ತಿ ಮಾಡಿದ್ದಾರೆ. ವಾಸ್ತವವಾಗಿ ರೈತರಿಗೆ ದೊರಕಬೇಕಿರುವ ಪರಿಹಾರದ ಬಾಕಿ ಮೊತ್ತ ಈಗಾಗಲೇ ಸರ್ಕಾರದಿಂದ ಬಿಡುಗಡೆಯಾಗಿದ್ದು, ಈ ಹಣವನ್ನು ಠೇವಣಿ ಇಡಲಾಗಿದೆ. ಸಂಬಂಧಪಟ್ಟ ಇಲಾಖೆ ಅಧೀನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಹಣ ಬಿಡುಗಡೆಗೊಳಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ವೈ.ಜಿ.ರಘು, ಅರಳಕುಪ್ಪೆ ರೂಪಾ, ಗಿರಿಯಾರಹಳ್ಳಿ ಶ್ರೀಮೂರ್ತಿ, ಕುಮಾರ್, ಮಹೇಶ್ ಇದ್ದರು.