ಶ್ರೀರಂಗಪಟ್ಟಣ ತಾಲೂಕಿನ ಮುಂಡುಗದೊರೆ ಗ್ರಾಮದಲ್ಲಿ ರಸ್ತೆ ಒತ್ತುವರಿ ಖಂಡಿಸಿ ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರು ಅನಿದಿಷ್ಟಾವಧಿ ಧರಣಿ ಆರಂಭಿಸಿದರು. ಮುಖಂಡರಾದ ಪಾಂಡು, ಮುಡುಂಗದೊರೆ ಮೋಹನ್, ಮಹದೇವಪುರ ಮಹದೇಸ್ವಾಮಿ ಇತರರು ಇದ್ದರು.
ಶ್ರೀರಂಗಪಟ್ಟಣ: ತಾಲೂಕಿನ ಮುಂಡುಗದೊರೆ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯನ್ನು ಪ್ರಭಾವಿಯೋರ್ವರು ಕಾನೂನು ಬಾಹಿರವಾಗಿ ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಸೋಮವಾರದಿಂದ ದಲಿತ ಸಂಘರ್ಷ ಸಮಿತಿ ಒಕ್ಕೂಟಗಳ ಕಾರ್ಯಕರ್ತರೊಂದಿಗೆ ಮುಡುಂಗದೊರೆ ಗ್ರಾಮಸ್ಥರು ಹೋರಾಟ ಹಮ್ಮಿಕೊಂಡಿದ್ದು, ತಾಲೂಕು ಆಡಳಿತ ಹಾಗೂ ತಹಸೀಲ್ದಾರ್ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥ ಮುಂಡಗದೊರೆ ಮೋಹನ್‌ಕುಮಾರ್ ಮಾತನಾಡಿ, ಗ್ರಾಮದ ಸರ್ವೇ ನಂ.351ರಲ್ಲಿ ಸಾರ್ವಜನಿಕರ ಬಳಕೆಗೆ ಮೀಸಲಾಗಿದ್ದ ಓಣಿ ಮತ್ತು ರಸ್ತೆ ಸ್ಥಳವನ್ನು ದೊಡ್ಡಪಾಳ್ಯ ಗ್ರಾಮದ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ನಮ್ಮ ಗ್ರಾಮದ ಸಾರ್ವಜನಿಕ ಸಶ್ಮಾನಕ್ಕೆ ತೆರಳುವ ರಸ್ತೆಯನ್ನು ಸಹ ಖಾಸಗಿ ಸ್ವತ್ತನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಅಕ್ರಮದ ಬಗ್ಗೆ ಸಾಕಷ್ಟು ಭಾರಿ ತಾಲೂಕಿನ ತಹಸೀಲ್ದಾರ್ ಅವರ ಗಮನಕ್ಕೆ ತಂದರೂ ತಾಲೂಕು ಆಡಳಿತ ನಮಗೆ ನೆರವಾಗಿಲ್ಲ ಎಂದು ಆರೋಪಿಸಿದರು.
ಮುಖಂಡ ಪಾಂಡು ಮಾತನಾಡಿ, ಗ್ರಾಮದಲ್ಲಿ ಸ್ಥಳಿಯರು, ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ದ ಜಾತಿ ದೌರ್ಜನ್ಯ ಜತೆಗೆ ಸಾರ್ವಜನಿಕ ರಸ್ತೆಯ ಬಳಕೆಗೆ ಕಿರುಕುಳ ಮತ್ತು ಕಾನೂನು ಬಾಹಿರವಾಗಿ ಬಂದ್ ಮಾಡುವ ಮೂಲಕ ಕಬಳಿಸಿರುವುದು ಖಂಡನಾರ್ಹ. 1964ರ ಕರ್ನಾಟಕ ಭೂ ಕಂದಾಯ ಕಾಯ್ದೆ, ಸೆಕ್ಷನ್ 94 ಮತ್ತು 104ರ ಅನ್ವಯ ಸರ್ಕಾರಿ ಖರಾಬು ಜಾಗವನ್ನು ವೈಯಕ್ತಿಕ ಲಾಭಕ್ಕೆ ಬಳಸಿರುವುದು ದಂಡನಾರ್ಹ. ಇದರೊಂದಿಗೆ ಜಾತಿ ದೌರ್ಜನ್ಯ ತಡೆ ಕಾಯ್ದೆ 1989ರ ಅನ್ವಯ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ ಅನ್ಯಾಯಕ್ಕೊಳಗಾದ ಜನರಿಗೆ ಭೂಮಿ ಮರಳಿಸುವ ಮೂಲಕ ನ್ಯಾಯ ಕೊಡಿಸಬೇಕಿದೆ. ಇಲ್ಲವಾದಲ್ಲಿ ನ್ಯಾಯ ದೊರೆಯುವವರಿಗೂ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.