ಮಳವಳ್ಳಿ ತಾಲೂಕಿನ ಕಂದೇಗಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಗ್ರಾಪಂ ಸದಸ್ಯರಿಗೆ ಆಯೋಜಿಸಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಅರಿವು ಕಾರ್ಯಕ್ರಮದಲ್ಲಿ ಟಿ.ಎಂ.ಸೌಮ್ಯಾ ಮಾತನಾಡಿದರು. ಮುಖ್ಯಶಿಕ್ಷಕ ಎಚ್.ಬಿ.ರಾಜು, ಶಿಕ್ಷಕರು ಇದ್ದರು
ಮಳವಳ್ಳಿ : ಹೆಣ್ಣು ಮಕ್ಕಳ ಲಿಂಗಾನುಪಾತ ಕುಸಿತ ತಡೆದು ಅವರ ಶಿಕ್ಷಣ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಜಾರಿಗೊಳಿಸಿರುವ ‘ಬೇಟಿ ಬಚಾವೋ ಬೇಟಿ ಪಡಾವೋ’ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲಿಂಗ ಅಸಮಾನತೆ ಸಾಮಾನ್ಯ ತಜ್ಞೆ ಟಿ.ಎಂ.ಸೌಮ್ಯಾ ಹೇಳಿದರು.
ತಾಲೂಕಿನ ಕಂದೇಗಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಯೋಜಿಸಿದ್ದ ‘ಬೇಟಿ ಬಚಾವೋ ಬೇಟಿ ಪಡಾವೋ’ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಭ್ರೂಣ ಹತ್ಯೆ ಮತ್ತು ಹೆಣ್ಣು ಮಕ್ಕಳ ಮೇಲಿನ ತಾರತಮ್ಯದಿಂದಾಗಿ ದೇಶದಲ್ಲಿ ಲಿಂಗಾನುಪಾತ ಅಸಮತೋಲನ ಉಂಟಾಗಿದೆ. ಇದರಿಂದ ಮುಂದೆ ಅನೇಕ ಸಾಮಾಜಿಕ ಸಮಸ್ಯೆ ಎದುರಾಗಲಿವೆ. ಹೀಗಾಗಿ ಹೆಣ್ಣು ಮಗುವನ್ನು ಉಳಿಸಿ, ಬೆಳೆಸಿ, ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಲಿಂಗ ತಾರತಮ್ಯವನ್ನು ತೊಡೆದು ಹಾಕುವುದು, ಹೆಣ್ಣು ಮಕ್ಕಳ ಜನನ, ಶಿಕ್ಷಣ ಉತ್ತೇಜಿಸುವುದು ಮತ್ತು ಸುರಕ್ಷಿತ ವಾತಾವರಣ ಒದಗಿಸುವುದು ‘ಬೇಟಿ ಬಚಾವೋ ಬೇಟಿ ಪಡಾವೋ’ ಕಾರ್ಯಕ್ರಮದ ಮುಖ್ಯ ಉದ್ದೇಶ. ಇದು ಯಶಸ್ವಿಯಾಗಲು ಸಮಾಜದ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಸಮಾಜದಲ್ಲಿ ಗಂಡು-ಹೆಣ್ಣು ಇಬ್ಬರಿಗೂ ಸಮಾನತೆ ಇದೆ. ಆದರೆ ಇಂದಿಗೂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಪ್ರಕರಣಗಳು ನಡೆಯುತ್ತಿವೆ. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಶಿಕ್ಷಿತ ಹೆಣ್ಣು ಮಗಳಿಂದ ಮಾತ್ರ ಬಲವಾದ ಸಮಾಜ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪುರುಷ, ಮಹಿಳೆ ಮತ್ತು ಇತರರ ಬಗ್ಗೆ ಇರುವ ರೂಢಿಗತ ನಂಬಿಕೆಗಳನ್ನು ಬದಲಾಯಿಸಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಲಿಂಗ ಸಮಾನತೆಯ ಬಗ್ಗೆ ಪಾಠ ಮಾಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವುದು ಮತ್ತು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಶಿಕ್ಷಕರು ಹಾಗೂ ಪಾಲಕರ ಕರ್ತವ್ಯ ಎಂದರು.
ಎಲ್ಲಿಯಾದರೂ ಲೈಂಗಿಕ ದೌರ್ಜನ್ಯ ಅಥವಾ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಮಹಿಳಾ ಸಹಾಯವಾಣಿಗೆ ಮಾಹಿತಿ ನೀಡಬೇಕು. ಇಂತಹ ಪ್ರಕರಣಗಳನ್ನು ಮುಚ್ಚಿಡದೆ ವರದಿ ಮಾಡುವ ಮೂಲಕ ಅಪರಾಧಿಗಳಿಗೆ ಕಡಿವಾಣ ಹಾಕಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ‘ಬೇಟಿ ಬಚಾವೋ’ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಎಚ್.ಬಿ.ರಾಜು, ಸಹ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.