ಹನಿ ಹಾಲಿಗೂ ಸೂಕ್ತ ಮೌಲ್ಯ ಸಿಗಲಿ

ಶ್ರೀರಂಗಪಟ್ಟಣ ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ 33 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ 3,000 ಲೀಟರ್ ಸಾಮರ್ಥ್ಯದ ಬಿಎಂಸಿ (ಬಲ್ಕ್ ಮಿಲ್ಕ್ ಕೂಲರ್) ಘಟಕವನ್ನು ಗುರುವಾರ ಕ್ಷೇತ್ರದ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಮನ್‌ಮುಲ್ ಅಧ್ಯಕ್ಷ ಶಿವಕುಮಾರ್, ನಿರ್ದೇಶಕ ಬಿ.ಬೋರೇಗೌಡ, ಮನ್‌ಮುಲ್ ವ್ಯವಸ್ಥಾಪಕ ಡಾ.ಅಕ್ಕಲಪ್ಪ ರೆಡ್ಡಿ ಇತರರು ಇದ್ದರು.
ಶ್ರೀರಂಗಪಟ್ಟಣ ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ 33 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ 3,000 ಲೀಟರ್ ಸಾಮರ್ಥ್ಯದ ಬಿಎಂಸಿ (ಬಲ್ಕ್ ಮಿಲ್ಕ್ ಕೂಲರ್) ಘಟಕವನ್ನು ಗುರುವಾರ ಕ್ಷೇತ್ರದ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಮನ್‌ಮುಲ್ ಅಧ್ಯಕ್ಷ ಶಿವಕುಮಾರ್, ನಿರ್ದೇಶಕ ಬಿ.ಬೋರೇಗೌಡ, ಮನ್‌ಮುಲ್ ವ್ಯವಸ್ಥಾಪಕ ಡಾ.ಅಕ್ಕಲಪ್ಪ ರೆಡ್ಡಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಆಶಯ
  • ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಬಿಎಂಸಿ ಘಟಕ ಉದ್ಘಾಟನೆ
ಶ್ರೀರಂಗಪಟ್ಟಣ: ಹೈನುಗಾರಿಕೆ ಗ್ರಾಮೀಣ ಭಾಗದ ರೈತಾಪಿ ಜನರ ಆರ್ಥಿಕತೆಯ ಬೆನ್ನೆಲುಬಾಗಿದೆ. ನಿತ್ಯ ಬೆವರು ಸುರಿಸಿ ಶ್ರಮಿಸುವ ನಮ್ಮ ಹಾಲು ಉತ್ಪಾದಕರು ತರುವ ಪ್ರತಿಯೊಂದು ಹನಿ ಹಾಲಿಗೂ ಸೂಕ್ತ ಮೌಲ್ಯ ಸಿಗಬೇಕಿದ್ದು, ಈ ಬಿಎಂಸಿ ಘಟಕ ಅದಕ್ಕೆ ಪೂರಕವಾಗಿ ನೆರವಾಗಲಿದೆ ಎಂದು ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಗುರುವಾರ 33 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ 3,000 ಲೀಟರ್ ಸಾಮರ್ಥ್ಯದ ಬಿಎಂಸಿ (ಬಲ್ಕ್ ಮಿಲ್ಕ್ ಕೂಲರ್) ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ರೈತನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಈ ಬಿಎಂಸಿ ಘಟಕವು ಕೇವಲ ಒಂದು ಕಟ್ಟಡವಲ್ಲ, ಇದು ನಮ್ಮ ಭಾಗದ ನೂರಾರು ಹೈನುಗಾರರ ಬದುಕಿಗೆ ಆಸರೆಯಾಗುವ ಜೀವನಾಡಿ. ಈ ಅತ್ಯಾಧುನಿಕ ಘಟಕವನ್ನು ನಮ್ಮ ಭಾಗಕ್ಕೆ ಮಂಜೂರು ಮಾಡುವಲ್ಲಿ ಕರ್ನಾಟಕ ಹಾಲು ಮಹಾಮಂಡಳಿ, ಮನ್‌ಮುಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಒಕ್ಕೂಟದ ನಿರ್ದೇಶಕ ಬಿ.ಬೋರೇಗೌಡ್ರು ಮತ್ತು ಶ್ರಮಿಸಿದ ಪ್ರತಿಯೊಬ್ಬ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಈ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನಮ್ಮ ರೈತ ಬಾಂಧವರು ಈ ಘಟಕದ ಸಂಪೂರ್ಣ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಹೈನುಗಾರಿಕೆಯನ್ನು ಮತ್ತಷ್ಟು ವಿಸ್ತರಿಸಿ, ಆರ್ಥಿಕವಾಗಿ ಸದೃಢರಾಗಬೇಕು. ಜತೆಗೆ ಗ್ರಾಮೀಣ ಜನರ ಆರೋಗ್ಯಕ್ಕಾಗಿ ಶುದ್ದ ಕುಡಿಯುವ ನೀರು ನೂತನ ಘಟಕ ಸಹ ಒಕ್ಕೂಟದಿಂದ ಸ್ಥಾಪನೆಯಾಗಿದ್ದು, ಇದರ ಸದ್ಬಳಕೆಯಾಗಲಿ ಎಂದರು.
ಮನ್‌ಮುಲ್ ನಿರ್ದೇಶಕ ಬಿ.ಬೋರೇಗೌಡ್ರು ಮಾತನಾಡಿ, ಕ್ಷೇತ್ರದ ಶಾಸಕರ ಬೆಂಬಲ ಹಾಗೂ ಸಹಕಾರದಿಂದ ಈ ಘಟಕ ನಿರ್ಮಾಣ ಯಶಸ್ಸು ಕಂಡಿದೆ. ಈ ಬಿಎಂಸಿ ಘಟಕದಿಂದ ಹಾಲಿನ ಗುಣಮಟ್ಟ ರಕ್ಷಣೆ ಸಾಧ್ಯವಾಗಿದ್ದು, ಹಾಲು ಕರೆದ ತಕ್ಷಣ ಅದನ್ನು ಸರಿಯಾದ ತಾಪಮಾನದಲ್ಲಿ ತಂಪು ಮಾಡುವುದರಿಂದ ಹಾಲು ಕೆಡುವುದನ್ನು ತಡೆಯಬಹುದು. ಹಾಲಿನ ಗುಣಮಟ್ಟ (ಫ್ಯಾಟ್ ಮತ್ತು ಎಸ್.ಎನ್.ಎಫ್) ಉತ್ತಮವಾಗಿ ಕಾಯ್ದುಕೊಳ್ಳುವುದರಿಂದ ರೈತರಿಗೆ ಹಾಲಿನ ಉತ್ತಮ ಬೆಲೆ ಸಿಗುತ್ತದೆ. ಜತೆಗೆ ಹಾಲನ್ನು ದೂರದ ಡೇರಿಗಳಿಗೆ ತಕ್ಷಣವೇ ಸಾಗಿಸುವ ಗಡಿಬಿಡಿ ತಪ್ಪುತ್ತದೆ ಮತ್ತು ರೈತರು ತಮಗೆ ಅನುಕೂಲಕರವಾದ ಸಮಯದಲ್ಲಿ ಹಾಲು ನೀಡಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ಮನ್‌ಮುಲ್ ವ್ಯವಸ್ಥಾಪಕ ಡಾ.ಅಕ್ಕಲಪ್ಪ ರೆಡ್ಡಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎ.ಆರ್.ನಾಗಭೂಷಣ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಗಣೇಶ್ ನಾಯಕ್, ಸಿಡಿಒ ಪ್ರಸಾದ್, ಹಾಲು ಒಕ್ಕೂಟದ ಶ್ರೀರಂಗಪಟ್ಟಣ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಗ್ರಾಮದ ಹಾಲು ಒಕ್ಕೂಟದ ಅಧ್ಯಕ್ಷ ಕರೀಗೌಡ, ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net