ಗುಣಮಟ್ಟ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಿ

ಕಿಕ್ಕೇರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಗುರುವಾರ ಜರುಗಿತು. ಕೃಷ್ಣೇಗೌಡ, ಸಹದೇವು, ಚಲುವನಾರಾಯಣಸ್ವಾಮಿ, ವೆಂಕಟೇಗೌಡ, ಮಮತಾ, ಕುಮಾರಸ್ವಾಮಿ, ಬಸವರಾಜು ಮತ್ತಿತರರಿದ್ದರು.
ಕಿಕ್ಕೇರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಗುರುವಾರ ಜರುಗಿತು. ಕೃಷ್ಣೇಗೌಡ, ಸಹದೇವು, ಚಲುವನಾರಾಯಣಸ್ವಾಮಿ, ವೆಂಕಟೇಗೌಡ, ಮಮತಾ, ಕುಮಾರಸ್ವಾಮಿ, ಬಸವರಾಜು ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಅಭಿಮತ
ಕಿಕ್ಕೇರಿ: ನಾಯಿಕೊಡೆಯಂತೆ ಖಾಸಗಿ ಶಿಕ್ಷಣ ಸಂಸ್ಥೆ ತಲೆ ಎತ್ತುತ್ತಿದ್ದು ಇವುಗಳಿಗೆ ಪೈಪೋಟಿ ನೀಡಿ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ತಲುಪುವಂತೆ ನೋಡಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ತಿಳಿಸಿದರು.
ಇಲ್ಲಿನ ಕೆಪಿಎಸ್ ಶಾಲೆಯ ಪಿಯು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ, ವಿವಿಧ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ತಾಲೂಕಿನಲ್ಲಿಯೇ ದೊಡ್ಡ ಹೋಬಳಿ, ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಕೇಂದ್ರವಾಗಿದೆ. ರೈತಾಪಿ ಮಕ್ಕಳೇ ಪ್ರಧಾನವಾಗಿದ್ದು ಪಾಲಕರ ಮನವೊಲಿಸಿ ಸರ್ಕಾರಿ ಶಾಲೆಗೆ ಸೇರಿಸಲು ಶಿಕ್ಷಕರು ಮುಂದಾಗಿ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಹೊಸ ಚಟುವಟಿಕೆಗಳನ್ನು ಆಯೋಜಿಸಿ ಎಂದರು.
ಪ್ರತಿಭೆಗಳಿರುವುದೇ ಸರ್ಕಾರಿ ಗ್ರಾಮೀಣ ಪ್ರದೇಶದಲ್ಲಿ. ಅತ್ಯುತ್ತಮ ಪರಿಸರ ಈ ಕಾಲೇಜಿನಲ್ಲಿದೆ. ಸಮರ್ಪಕವಾಗಿ ಬಳಸಿಕೊಳ್ಳಲು ಎಲ್ಲರ ಸಾಂಕ ಸಹಕಾರ ಬೇಕಿದೆ. ದೂರದ ಊರುಗಳಿಗೆ ಬಸ್‌ನಲ್ಲಿ ಹೋಗುವ ಹುಚ್ಚು ಸಾಹಸ ಬಿಡಿ. ಓದುವ ವಯಸ್ಸಿನಲ್ಲಿ ಮೋಜು, ಮಸ್ತಿ, ಅನವಶ್ಯಕ ತಿರುಗಾಟ ಬೇಡ. ಕ್ಷಣಿಕ ಸುಖ ಭವಿಷ್ಯವನ್ನು ಕಿತ್ತುಕೊಳ್ಳಲಿದೆ. ತಲೆ ಎತ್ತಿ ಬದುಕಲು ತಲೆ ಬಗ್ಗಿಸಿ ನೋಡುವ ನೋಟದ ಮೊಬೈಲ್ ಬಿಡಿ. ಪುಸ್ತಕ, ಪತ್ರಿಕೆ ಓದಿ ಬದುಕು ಬಂಗಾರವಾಗಲಿದೆ ಎಂದು ಹಿತನುಡಿದರು.
ಪ್ರಾಂಶುಪಾಲ ಎಂ.ಆರ್. ಸಹದೇವು ಮಾತನಾಡಿ, ಜ್ಞಾನಕಾಶಿಯಾಗಿ ನಮ್ಮ ಕ್ಯಾಂಪಸ್ ಆಗಬೇಕಿದೆ. ಎನ್‌ಎಸ್‌ಎಸ್ ಘಟಕದಲ್ಲಿ ವಿವಿಧ ಚಟುವಟಿಕೆಗಳು ನಡೆಯಲು ಕನಿಷ್ಠ ನೂರಾರೂ ಸಂಖ್ಯೆ ವಿದ್ಯಾರ್ಥಿಗಳು ಬೇಕಿದೆ. ಪಾಲಕರು ಸರ್ಕಾರಿ ಕಾಲೇಜಿಗೆ ಮಕ್ಕಳನ್ನು ದಾಖಲು ಮಾಡಿ. ಉತ್ತಮ ಫಲಿತಾಂಶ ನೀಡಲು ಬದ್ಧರಿರುವುದಾಗಿ ನುಡಿದರು.
ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ನಮ್ಮ ಶಾಲೆಯಲ್ಲಿ ಓದಿದ ಮಕ್ಕಳು ಖಾಸಗಿ ಪಿಯು ಕಾಲೇಜಿಗೆ ಸೇರಿಸುವ ಪರಿಪಾಠವನ್ನು ಪಾಲಕರು ಬಿಡಬೇಕಿದೆ. ಎಲ್ಲ ಸೌಲಭ್ಯ ನಮ್ಮ ಸರ್ಕಾರಿ ಶಿಕ್ಷಣ ಸಂಸ್ಥೆ ಕ್ಯಾಂಪಸ್‌ನಲ್ಲಿದೆ. ಶಿಸ್ತಿದೆ ಎಂಬ ಭಯವನ್ನು ಮರೆಮಾಚಿ ಮಕ್ಕಳು ಬೇರೆ ಕಾಲೇಜಿಗೆ ಸೇರುವ ನೆಪಕ್ಕೆ ಮಣೆ ಹಾಕಬಾರದು ಎಂದು ವಿನಂತಿಸಿದರು.
ಸಂತೇಬಾಚಹಳ್ಳಿ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಡಿ.ಪಿ. ವೆಂಕಟೇಗೌಡ ಮಾತನಾಡಿದರು.
ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸಂಭ್ರಮದಿಂದ ಹಿರಿಯ ವಿದ್ಯಾರ್ಥಿಗಳು ಸ್ವಾಗತಿಸಿದರು. ಪ್ರಸಕ್ತ ಸಾಲಿನ ವಿವಿಧ ಸಂಘಗಳನ್ನು ಉದ್ಘಾಟಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಕೆಪಿಎಸ್ ಮುಖ್ಯಶಿಕ್ಷಕಿ ಮಮತಾ, ಎನ್‌ಎಸ್‌ಎಸ್ ಅಧಿಕಾರಿ ಜಿ.ಎಸ್. ಕುಮಾರಸ್ವಾಮಿ, ಎನ್‌ಸಿಸಿ ಅಧಿಕಾರಿ ಎಸ್.ಎಂ. ಬಸವರಾಜು, ಪಾಲಾಕ್ಷ, ನಂಜುಂಡಯ್ಯ, ಉಪನ್ಯಾಸಕರಾದ ಎನ್. ರವೀಂದ್ರ, ಎ.ಎಂ. ಮಂಜುನಾಥ್, ಎಸ್.ಡಿ. ಹರೀಶ್, ವಿನಾಯಕ ಎಂ. ಅರ್ಪಿತಾ, ಫಾಜಿಲಾ ಖಾನಂ, ಚಂದ್ರಿಕಾ, ಲಾವಣ್ಯ, ಸಹನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net