ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯ ಶಕ್ತಿ ದೇವತೆಯ ಆಲಯವನ್ನು ಆಷಾಢ ಮಾಸದ ಕಡೆಯ ಶುಕ್ರವಾರ ಪ್ರಯುಕ್ತ ಸೇಬು ಹಣ್ಣು ಹಾಗೂ ಲಿಚಿ ಹಣ್ಣು ಸೇರಿದಂತೆ ವಿವಿಧ ವಿಶೇಷ ಹೂವುಗಳಿಂದ ಅಧಿದೇವತೆ ಶ್ರೀ ಚಾಮುಂಡೇಶ್ವರಿಯನ್ನು ಅಲಂಕರಿಸಲಾಗಿತ್ತು.
ಆಷಾಢ ಮಾಸದ ಕಡೇ ಶುಕ್ರವಾರದ ಪ್ರಯುಕ್ತ ಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ ದೇವಾಲಯದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವೈಭವಯುತ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಬೆಳಗ್ಗೆ ದೇಗುಲದ ಪ್ರಧಾನ ಅರ್ಚಕ ಲಕ್ಷ್ಮೀಶ ಶರ್ಮ ನೇತೃತ್ವದಲ್ಲಿ ಮಹಾನ್ಯಾಸ ಪೂರಕವಾಗಿ ಅಧಿದೇವಿಯ ಮೂರ್ತಿಗೆ ಫಲಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಬಳಿಕ ಗರ್ಭಗುಡಿ ಮತ್ತು ಪ್ರಾಂಗಣವನ್ನು ಸುಮಾರು 1.5 ಸಾವಿರ ಹಸಿರು ಮತ್ತು ಕೆಂಪು ಬಣ್ಣದ ಸೇಬು ಹಣ್ಣುಗಳು ಹಾಗೂ ಲಿಚ್ಚಿ ಹಣ್ಣು ಸೇರಿದಂತೆ ವಿವಿಧ ವಿಶೇಷ ಹೂಗಳಿಂದ ಮನಮೋಹಕವಾಗಿ ಅಲಂಕರಿಸಲಾಗಿತ್ತು. ಶೇಷನಾಗನ ಮೇಲೆ ಮಹಾಲಕ್ಷ್ಮೀಯಂತೆ ಪ್ರತಿಷ್ಠಾಪಿಸಿ ದೇವಿಗೆ ರೇಷ್ಮೇ ಸೀರೆ ಮತ್ತು ಅಲಂಕಾರಿಕ ಒಡವೆಗಳಿಂದ ಸಿಂಗರಿಸಲಾಗಿತ್ತು. ಬಳಿಕ ತಾಯಿಗೆ ದುರ್ಗ ಸಪ್ತಶತಿ ಪಾರಾಯಣ, ಸಹಸ್ರನಾಮ, ಅಷ್ಟೋತ್ತರ ಹಾಗೂ ಮಂಗಳಾರತಿ ನೆರವೇರಿಸಿ ಭಕ್ತರ ದರ್ಶನಕ್ಕೆ ಅವಕಾಸ ಕಲ್ಪಿಸಲಾಯಿತು.
ನಾಡಿನಲ್ಲಿ ಮಳೆ-ಬೆಳೆ ಸೇರಿದಂತೆ ಸುಭೀಕ್ಷತೆ ಈ ವೇಳೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದ್ದು, ದೇವರ ದರ್ಶನಕ್ಕೆ ಆಗಮಿಸಿದ್ದ ಮಹಿಳೆಯರು ನಿಂಬೆ ಹಣ್ಣು ಆರತಿ ಹಾಗೂ ಬೆಲ್ಲದ ಆರತಿ ಸಲ್ಲಿಸಿ ತಾಯಿಗೆ ಪೂಜಿಸಿದರು. ಮೈಸೂರು, ಬೆಂಗಳೂರು, ಮಂಡ್ಯ, ಶ್ರೀರಂಗಪಟ್ಟಣ ಸೇರಿ ಸುತ್ತಮುತ್ತಲ ನೂರಾರು ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ತೆರಳಿದರು.