ಪದವಿ ಜತೆಗೆ ಉತ್ತಮ ಕೌಶಲ ಅಗತ್ಯ

ಕೆ.ಎಂ.ದೊಡ್ಡಿಯ ಭಾರತೀ ವಿದ್ಯಾ ಸಂಸ್ಥೆಯ ಕುವೆಂಪು ಸಭಾಗಂಣದಲ್ಲಿ ಆಯೋಜಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಭಾರತೀ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
ಕೆ.ಎಂ.ದೊಡ್ಡಿಯ ಭಾರತೀ ವಿದ್ಯಾ ಸಂಸ್ಥೆಯ ಕುವೆಂಪು ಸಭಾಗಂಣದಲ್ಲಿ ಆಯೋಜಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಭಾರತೀ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
Published on
ಕೆ.ಎಂ.ದೊಡ್ಡಿ; ಬಡ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿರುವ ಭಾರತೀ ಶಿಕ್ಷಣ ಸಂಸ್ಥೆ ಮುಂದಿನ ದಿನಗಳಲ್ಲಿ ಬಹು ದೊಡ್ಡ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಲಿದೆ ಎಂದು ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶಿವಚಿತ್ತಪ್ಪ ಹೇಳಿದರು.
ಇಲ್ಲಿನ ಭಾರತೀ ವಿದ್ಯಾ ಸಂಸ್ಥೆಯ ಕುವೆಂಪು ಸಭಾಗಂಣದಲ್ಲಿ ಭಾರತೀ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವತಿಯಿಂದ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಸಂಸ್ಥೆಯು ಶೈಕ್ಷಣಿಕ ಪ್ರಗತಿಗೆ ಉತ್ತಮ ವಾತಾವಾರಣ ಕಲ್ಪಿಸಿದೆ ಎಂದರು.
ಪದವಿ ನಂತರ ಪದವೀಧರರು ಉತ್ತಮ ಶಿಕ್ಷಣ ಪಡೆದು ಸಾಮಾನ್ಯ ಜ್ಞಾನವನ್ನು ಹೆಚ್ಚಿನದಾಗಿ ಪಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜತೆಗೆ ಕೌಶಲ ಪಡೆದುಕೊಂಡರೆ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಜತೆಗೆ ಉತ್ತಮ ಕೌಶಲಗಳನ್ನು ರೂಢಿಸಿಕೊಂಡು ಸ್ವತಂತ್ರ ಚಿಂತನೆಗಳ ಮೂಲಕ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಭಾರತೀ ಶಿಕ್ಷಣ ಸಂಸ್ಥೆಗೆ ವಿದೇಶಗಳಿಂದ ವಿದ್ಯಾರ್ಥಿಗಳು ಸಂಶೋಧನೆಗೆ ಆಗಮಿಸುತ್ತಿರುವುದು ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ತರುವ ವಿಷಯ. ಪದವೀಧರರು ತಾಳ್ಮೆಯ ಗುಣವನ್ನು ಹೊಂದಿ ಉತ್ತಮ ಗುರಿಯನ್ನಿಟ್ಟುಕೊಂಡು ಉತ್ತಮ ಪರಿಶ್ರಮವನ್ನು ಹಾಕಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ, ಭಾರತೀ ಶಿಕ್ಷಣ ಸಂಸ್ಥೆಯ ಚೇರ‌್ಮನ್ ಮಧು ಜಿ.ಮಾದೇಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಬಹಳಷ್ಟು ಪ್ರಗತಿ ಸಾಧಿಸಿದ್ದು ಎಐ (ಕೃತಕ ಬುದ್ಧಿಮತ್ತೆ) ನಿಂದ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯುವ ಸಾಮರ್ಥ್ಯ ಹೊಂದಿದ್ದೇವೆ. ಎಐನಿಂದ ವಿದ್ಯಾರ್ಥಿ ತನ್ನ ಅಂಗೈಯಲ್ಲಿ ಎಲ್ಲವನ್ನೂ ಸುಲಭವಾಗಿ ಕಲಿಯಬಹುದು ಎಂದು ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ, ಕಲಿಕೆ ಮತ್ತು ಶ್ರಮದ ಜತೆ ನಿರಂತರವಾಗಿ ಸಾಗಬೇಕು. ನಾವು ಕಲಿಕೆಯ ಜತೆಗೆ ಕಂಪ್ಯೂಟರ್ ಶಿಕ್ಷಣ ಅತಿ ಮುಖ್ಯವಾಗಿರುತ್ತದೆ. ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ವ್ಯವಹಾರಕ್ಕೂ ಕಂಪ್ಯೂಟರ್ ಅವಶ್ಯಕತೆ ಇದ್ದು ಅದರ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು ಆ ವೇಳೆ ಕಾಲಹರಣ ಮಾಡದೆ ಶೈಕ್ಷಣಿಕ ಪ್ರಗತಿಯತ್ತ ಗಮನ ನೀಡಬೇಕು. ನಿರಾಸಕ್ತಿಯಿಂದ ಏನೋ ಪದವಿ ಪಡೆಯಬೇಕು ಎಂಬ ಭಾವನೆಯಿಂದ ಪಡೆದರೆ ಸಾಲದು. ಅದರಲ್ಲಿ ಪರಿಪಕ್ವತೆ ಇರಬೇಕು. ಆಗ ಮಾತ್ರ ತಮ್ಮ ಪದವಿಗೆ ಪ್ರತಿಫಲ ದೊರೆಯಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಯು ಹೇಗೆ ಓದಬೇಕು ಯಾವ ರೀತಿ ಅಧ್ಯಯನ ಮಾಡಬೇಕು ಎಂಬುದನ್ನು ತಿಳಿದರೆ ಉದ್ಯೋಗ ದೊರೆಯಲಿದೆ. ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ತಾಂತ್ರಿಕತೆಗೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಈ ಬಗ್ಗೆ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ನಾಗರಾಜು ಮಾತನಾಡಿ, ಉತ್ತಮ ಗುರಿಯನ್ನು ಹೊಂದಿ ಸೂಕ್ತ ನಿರ್ಧಾರಗಳನ್ನು ಪಡೆದುಕೊಂಡು ಕಲಿಕೆಯೂ ನಿರಂತರವಾಗಿರಬೇಕು. ಪರಿಶ್ರಮದ ಮೂಲಕ ಯಶಸ್ಸಿನ ಹಾದಿಯನ್ನು ಕಂಡುಕೊಳ್ಳಬೇಕು ಎಂದು ಪದವೀಧರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪದವಿ ವಿಭಾಗದ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಗಣಕಯಂತ್ರ ವಿಭಾಗದಿಂದ 205 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 297 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಮೈಸೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ನಾಗರಾಜು, ಬಿಇಟಿ ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಜಿ.ಡಿ.ಹಳ್ಳಿ ಸಿದ್ದೇಗೌಡ, ಟ್ರಸ್ಟಿಗಳಾದ ಕಾರ್ಕಹಳ್ಳಿ ಬಸವೇಗೌಡ, ಜಯರಾಮು, ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ನಾಗರಾಜು, ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ್, ಪರೀಕ್ಷಾ ನಿಯಂತ್ರಕ ಕೆ.ಸಿ.ಸುಂದ್ರೇಶ್, ಉಪ ಪರೀಕ್ಷಾ ನಿಯಂತ್ರಕ ಡಾ.ಕೆ.ಟಿ.ಗಣೇಶ್ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net