ಎಲ್ಲ ಸಮಸ್ಯೆಗಳಿಗೆ ಪುಸ್ತಕದಲ್ಲೇ ಪರಿಹಾರ

ಮೇಲುಕೋಟೆಯಲ್ಲಿ ಭಗವದ್ರಾಮಾನುಜ ರಾಷ್ಟ್ರೀಯ ಸಂಸ್ಕೃತ ಸಂಶೋಧನಾ ಸಂಸ್ಥೆಯ ಸುವರ್ಣ ಮಹೋತ್ಸವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಅಹಲ್ಯಾ ಇತರರು ಇದ್ದರು.
ಮೇಲುಕೋಟೆಯಲ್ಲಿ ಭಗವದ್ರಾಮಾನುಜ ರಾಷ್ಟ್ರೀಯ ಸಂಸ್ಕೃತ ಸಂಶೋಧನಾ ಸಂಸ್ಥೆಯ ಸುವರ್ಣ ಮಹೋತ್ಸವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು. ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಅಹಲ್ಯಾ ಇತರರು ಇದ್ದರು.
Published on
ಮೇಲುಕೋಟೆ: ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಜ್ಞಾನಬಂಡಾರವಾದ ಪುಸ್ತಕದಲ್ಲಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಮೇಲುಕೋಟೆಯ ಭಗವದ್ರಾಮಾನುಜ ಸಂಸ್ಕೃತ ಸಂಶೋಧನಾ ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಿಕರು ಎಲ್ಲ ವಿಚಾರಗಳನ್ನು ತಾಳೆಗರಿಯಲ್ಲಿ ಬರೆದಿಟ್ಟಿದ್ದಾರೆ. ಆ ವಿಚಾರಧಾರೆಗಳನ್ನು ಈಗಿನ ಯುವ ಸಮೂಹಕ್ಕೆ ತಲುಪಿಸಬೇಕಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ತಾಳೆಗರಿಯಲ್ಲಿರುವ ಮಾಹಿತಿಗಳನ್ನು ದಾಖಲೀಕರಣ ಮಾಡಬೇಕು. ಈ ಕಾರ್ಯದಲ್ಲಿ ನಾನೂ ಸಹ ತಂತ್ರಜ್ಞರನ್ನು ಕರೆಸಿ ತಾಳೆಗರಿ ಅಧ್ಯಯನದ ಕೆಲಸವನ್ನು ತ್ವರಿತವಾಗಿ ಮಾಡಲು ಸಹಾಯ ಮಾಡುತ್ತೇನೆ ಎಂದರು.
ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ವರ್ಷವಿಡೀ ಅರ್ಥಪೂರ್ಣವಾಗಿ ನಡೆಯಬೇಕು. ಸಂಸ್ಥೆಯ ವಿಚಾರಧಾರೆಗಳು ನಾಡಿನ ಎಲ್ಲೆಡೆ ತಲುಪುವಂತಾಗಬೇಕು ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಸಿ.ಎನ್.ಸೀತಾರಾಮ್ ಮಾತನಾಡಿ, ಜಾತಿಮತ ಧರ್ಮ ಮೀರಿದ ಸಮಾನತೆಯ ಸಂದೇಶ ಸಾರಿದ ರಾಮಾನುಜಾಚಾರ್ಯರು ಪ್ರಾರ್ಥಸ್ಮರಣೀಯರಾಗಿದ್ದಾರೆ. ರಾಮಾನುಜಾಚಾರ್ಯರ ಸಾಮಾಜಿಕ ಸಂದೇಶಗಳನ್ನು ಜಗತ್ತಿಗೆ ಪ್ರಚುರಪಡಿಸಲು ಸರ್ಕಾರ ಮೇಲುಕೋಟೆಯಲ್ಲಿ ಸಂಸ್ಕೃತ ಸಂಶೋಧನಾ ಕೇಂದ್ರ ಸ್ಥಾಪಿಸಿದೆ. ನಾನು ಮಂಡ್ಯ ಜಿಲ್ಲಾಧಿಕಾರಿಯಾಗಿದ್ದಾಗ ಸಂಸ್ಥೆಯ ನಿಯೋಜಿತ ನಿರ್ದೇಶಕನಾಗಿ ಕರ್ತವ್ಯ ಮಾಡಿ ಸಂಸ್ಥೆಯ ಎಲ್ಲ ನೌಕರರಿಗೆ ಸೇವಾಭದ್ರತೆ ಒದಗಿಸಿ, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಅಹಲ್ಯಾ ಮಾತನಾಡಿ, ಮೇಲುಕೋಟೆಯ ಸಂಸ್ಕೃತ ಸಂಶೋಧನಾ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದಿದೆ. ಇಡೀ ಭಾರತದಲ್ಲಿ ರಾಮಾನುಜಾಚಾರ್ಯರ ಹೆಸರಲ್ಲಿರುವ ಏಕೈಕ ಸಂಸ್ಕೃತ ಸಂಶೋಧನಾ ಸಂಸ್ಥೆ ಎಂಬ ಕೀರ್ತಿ ಮೇಲುಕೋಟೆಯ ಭಗವದ್ ರಾಮಾನುಜಾ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಿದೆ. ಸುವರ್ಣ ಮಹೋತ್ಸವದ ಅಂಗವಾಗಿ ಮೇಲುಕೋಟೆಯ ಸಂಸ್ಥೆಯಲ್ಲಿ ಹತ್ತಾರು ಗ್ರಂಥಗಳ ಪ್ರಕಟಣೆ ಹಾಗೂ ಕಮ್ಮಟಗಳನ್ನು ಆಯೋಜಿಸಲಾಗುತ್ತದೆ. ಕರ್ನಾಟಕ ಸಂಸ್ಕೃತ ವಿವಿ ಎಲ್ಲ ರೀತಿಯ ಸಹಕಾರ ನೀಡುತ್ತಾ ಬಂದಿದೆ ಎಂದರು.
ಭರಾರಾಸಂ ಕುಲಸಚಿವ ಡಾ.ಎಸ್ ಕುಮಾರ್ ಮಾತನಾಡಿ, ಚೆಲುವನಾರಾಯಣಸ್ವಾಮಿ ದೇವಾಲಯದ ಒಂದು ಲಕ್ಷ ರೂ. ಮೂಲಧನದೊಂದಿಗೆ ಆರಂಭವಾದ ಸಂಸ್ಥೆ ಐವತ್ತು ವಸಂತಗಳನ್ನು ಪೂರೈಸಿದೆ. ಸುಮಾರು 6 ಲಕ್ಷ ತಾಳೆಗರಿಗಳನ್ನು ಸಂರಕ್ಷಿಸಿ ಡಿಜಿಟಲೀಕರಣ ಮಾಡಿದೆ. ನೂರಾರು ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದೆ ಎಂದರು.
ಭಗವದ್ರಾಮಾನುಜ ವೇದಿಕೆಯಲ್ಲಿ ನಡೆದ ಸಮಾರಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸೀತಾರಾಂ ಅವರಿಗೆ ಸೇವಾಶ್ರೀ, ಕೋವಿಲ್ ನಂಬಿ ಸ್ಥಾನೀಕಂ ಸುದರ್ಶನ ನರಸಿಂಹಾಚಾರ್‌ಗೆ ಮರಣೋತ್ತರವಾಗಿ ಅವರ ಪುತ್ರ ಕೆ.ಎಸ್ ಸಂಪತ್ ಕುಮಾರನ್ ಅವರಿಗೆ ಕೈಂಕರ್ಯಶ್ರೀ, ವಿದ್ವಾನ್ ಎಸ್ ಕೃಷ್ಣನ್ ಮತ್ತು ವಿದುಶಿ ಸಾವಿತ್ರಿಗೆ ಜ್ಞಾನನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಹಲವು ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net